ಸಚಿವ ಸ್ಥಾನ ಸಿಗದಿರುವುದು ಅನ್ಯಾಯವಾಗಿದೆ: ಸಂಕೇತ್ ಪೂವಯ್ಯ

sanketh poovayiya
Published on

ಮಡಿಕೇರಿ: ಚುನಾವಣೆಗೂ ಮುನ್ನ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯರವರು ಸಚಿವ ಸ್ಥಾನ ನೀಡುವುದ್ದಾಗಿ ಹೇಳಿದ್ದರು. ಆದರೆ, ಕೊಟ್ಟ ಮಾತನ್ನು ತಪ್ಪಿದ್ದಾರೆ. ಇದರಿಂದ ಮತದಾರರಿಗೆ ಹಾಗೂ ನಮಗೆ ಬಹಳ ಅನ್ಯಾಯವಾಗಿದೆ ಎಂದು ಕೆಪಿಸಿಸಿ ವಕ್ತಾರ ಮೇರಿಯಂಡ ಸಂಕೇತ್ ಪೂವಯ್ಯ ಅಸಮಾಧಾನ ಹೊರಹಾಕಿದರು.


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೌಗೋಳಿಕವಾಗಿ ಕೊಡಗು ಭಿನ್ನವಾಗಿದೆ. ಇಲ್ಲಿನ ಸಮಸ್ಯೆಗಳು ಕೂಡಾ ಇತರೆ ಜಿಲ್ಲೆಗಳಿಗಿಂತ ಬೇರೆಯದ್ದೇ ರೀತಿಯಲ್ಲಿದೆ. ಕೊಡಗಿನ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಾದರೆ ಸಂಪುಟದಲ್ಲಿ ಚರ್ಚೆಯಾಗಬೇಕು. ಈ ಕಾರಣಕ್ಕಾಗಿ ಅನುಭವಿಯಾದ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ನಮ್ಮ ಬೇಡಿಕೆ ಇತ್ತು. ಚುನಾವಣಾ ಪೂರ್ವದಲ್ಲಿ ನಾಯಕರು ಸಕಾರಾತ್ಮಕವಾಗಿ ಭರವಸೆ ನೀಡಿದ್ದರು. ಆದರೀಗ ಅವಕಾಶ ಕೈತಪ್ಪಿರುವುದು ಬಹಳ ನೋವುಂಟು ಮಾಡಿದೆ ಎಂದು ಹೇಳಿದರು.


ಸಿದ್ದರಾಮಯ್ಯ ಅವರು ಕೊಡಗಿಗೆ ಬಂದಾಗ ಆದ ಕಹಿ ಘಟನೆ ಸಂದರ್ಭದ ಬಳಿಕ ಕೊಡಗಿನಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾದರೆ ಸೂಕ್ತ ಸ್ಥಾನಮಾನ ಕೊಡುತ್ತೇನೆ ಎಂದಿದ್ದರು. ಡಿ.ಕೆ.ಶಿವಕುಮಾರ್ ಚುನಾವಣಾ ಪ್ರಚಾರಕ್ಕೆ ಬಂದಿದ್ದಾಗಲೂ ಸಚಿವ ಸ್ಥಾನ ನೀಡುವುದಾಗಿ ಹೇಳಿದ್ದರು. ಪೊನ್ನಣ್ಣ ಅವರಿಗೆ ಕೊಡಗಿನ ಸಮಸ್ಯೆಗಳ ಬಗ್ಗೆ ಅರಿವಿದೆ. ಕಾಂಗ್ರೆಸ್ ಸರ್ಕಾರ ಯಾವತ್ತೂ ಕೊಡಗಿಗೆ ಅನ್ಯಾಯ ಮಾಡಿಲ್ಲ. ಹಿಂದೆ ಹಲವು ಸರ್ಕಾರದಲ್ಲಿ ಇಲ್ಲಿನವರಿಗೆ ಉತ್ತಮ ಸ್ಥಾನಮಾನ ಸಿಕ್ಕಿದೆ. ಆದರೆ ಈ ಬಾರಿ ಅರ್ಹತೆ ಇದ್ದಾಗಲೂ ಅವಕಾಶ ವಂಚಿತರಾಗಿರುವುದು ನೋವುಂಟುಮಾಡಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net