ಮಣ್ಣು ಕದ್ದಿರುವುದು ನಿಜ, ಯಾರೆಂದು ಗೊತ್ತಿಲ್ಲ

Ganigarike
Published on

ಶಿವಾನಂದ ಹಿರೇಮಠ ಗದಗ
ಅಕ್ರಮ ಮಣ್ಣು ಗಣಿಗಾರಿಕೆ ವಿಷಯದಲ್ಲಿ ಕೇವಲ ಪತ್ರ ವ್ಯವಹಾರಕ್ಕೆ ಸೀಮಿತವಾಗಿರುವ ಗ್ರಾಪಂ, ಕಂದಾಯ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜವಾಬ್ದಾರಿಯಿಂದ ನುಣುಚಿಕೊಳ್ಳಲು ನಾನಾ ನೆಪ ಹೂಡುತ್ತಿವೆ.

ಇಲಾಖೆಯಿಂದ ಇಲಾಖೆಗೆ ಪತ್ರ ಕಳುಹಿಸುವ ಮೂಲಕ ಕಾಲಹರಣ ಮಾಡುತ್ತ ತಮ್ಮನ್ನು ತಾವು ಬಚಾವು ಮಾಡಿಕೊಳ್ಳಲು ದಾರಿ ಹುಡುಕುವ ನಡೆ ಅನುಸರಿಸುತ್ತಿದ್ದು, ಅಕ್ರಮ ತಡೆಗಟ್ಟಲು ಮತ್ತೊಂದು ಇಲಾಖೆ ಸಹಕಾರ ಅಗತ್ಯ ಎಂದು ಇತರ ಇಲಾಖೆಗಳೆಡೆಗೆ ಬೊಟ್ಟು ಮಾಡುತ್ತಿವೆ.

ನಗರದ ಹೊರ ವಲಯದ ಆರ್‌ಟಿಒ ಕಚೇರಿ ಪಕ್ಕದಲ್ಲೇ ಇರುವ ಗೃಹ ಮಂಡಳಿಯ ಸರ್ವೇ ನಂ 179/ಎ(ಕಳಸಾಪುರ ಗ್ರಾಮ ವ್ಯಾಪ್ತಿ) ಜಮೀನಿನಲ್ಲಿ ಗರಸು ಕೆಂಪು ಮಣ್ಣಿನ ಗಣಿಗಾರಿಕೆ ನಡೆಯುತ್ತಿದೆ. ರಾತ್ರಿ 11 ಗಂಟೆ ನಂತರ ಮಣ್ಣನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ವಿಷಯವನ್ನು ಸ್ವತಃ ಇಲಾಖೆ ಅಧಿಕಾರಿಗಳೇ ತಿಳಿಸಿದ್ದಾರೆ. ಹೀಗಿದ್ದರೂ ನಿಯಂತ್ರಿಸಲು ಈ ಭೂಮಿ ನಮ್ಮ ವ್ಯಾಪ್ತಿಗಿಲ್ಲ ಎಂಬ ಸಮಜಾಯಿಷಿ ನೀಡುತ್ತಿದ್ದಾರೆ. ಮಣ್ಣು ಅಗೆಯುತ್ತಿರುವ ಭೂಮಿ ಕಳಸಾಪುರ ಗ್ರಾಪಂ ವ್ಯಾಪ್ತಿಗೆ ಬರುತ್ತಿದ್ದರೂ 179/ಎ ಜಮೀನು ಕಂದಾಯ ಇಲಾಖೆಗೆ ಸಂಬಂಧಿಸಿದೆ ಎಂದು ಗ್ರಾಪಂ ಅಧಿಕಾರಿಗಳು ಹೇಳುತ್ತಾರೆ. ಸ್ಥಳೀಯ ಗ್ರಾಪಂ ವ್ಯಾಪ್ತಿಯಲ್ಲಿ ಜಮೀನಿದ್ದು, ಗ್ರಾಪಂ ಅಧಿಕಾರಿಗಳು ಅಕ್ರಮ ನಿಯಂತ್ರಿಸಬೇಕೆಂದು ಉತ್ತರಿಸುತ್ತಾರೆ. ಈ ನಡುವೆ 179/ಎ ಸರ್ವೇ ನಂಬರ್ ಭೂಮಿಯನ್ನು ಗ್ರಾಪಂಗೆ ಹಸ್ತಾಂತರಿಸಿದ್ದಾಗಿ ಗೃಹಮಂಡಳಿ ಅಧಿಕಾರಗಳು ಪ್ರತಿಕ್ರಿಯಿಸಿದ್ದಾರೆ. ಈ ವ್ಯವಹಾರ ಗಣಿ ಇಲಾಖೆಗೆ ಸಂಬಂಧಿಸಿದೆ ಎಂದು ಆರ್‌ಟಿಒ ಅಧಿಕಾರಿಗಳು ಉತ್ತರಿಸುತ್ತಾರೆ.

4800 ಮೆಟ್ರಿಕ್ ಟನ್ ಮಣ್ಣು ಮಾಯ

ಕೆಂಪು ಮಣ್ಣಿಗೆ ಕಂಟಕ ಎದುರಾಗಿರುವ ಕುರಿತು ವಿಜಯವಾಣಿ ಪತ್ರಿಕೆ ನಿರಂತರ ವರದಿ ಬಿತ್ತರಿಸಿದ ಹಿನ್ನೆಲೆಯಲ್ಲಿ ಸ್ಥಳ ವೀಕ್ಷಣೆ ಮಾಡಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖಾ ಅಧಿಕಾರಿಗಳು ಅಂದಾಜು 2 ಲಕ್ಷಕ್ಕೂ ಅಧಿಕ ಮೌಲ್ಯದ 4800 ಮೆಟ್ರಿಕ್ ಟನ್ ಕೆಂಪು ಗರಸು ಮಣ್ಣು ಕಾಣೆ ಆಗಿರುವ ಕುರಿತು ವರದಿ ತಯಾರಿಸಿದ್ದಾರೆ. ಮಣ್ಣು ಕದ್ದವರಾರು ಎಂಬುದು ತನಿಖೆ ನಂತರ ಗೊತ್ತಾಗಲಿದೆ. ರಾತ್ರಿ 11 ಗಂಟೆ ನಂತರ ಈ ಅಕ್ರಮ ನಡೆಯುತ್ತಿದೆ ಎಂದು ಸ್ಥಳೀಯರು, ಅಧಿಕಾರಿಗಳು ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.

ಅಧಿಕಾರಿಗಳ ಅಸಹಾಯಕತೆ

ಅಕ್ರಮ ತಡೆಗಟ್ಟುವ ವಿಷಯದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖಾ ಅಧಿಕಾರಿಗಳು ಅಸಹಾಯಕತೆ ತೋಡಿಕೊಂಡಿದ್ದಾರೆ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಒಂದೇ ಜೀಪ್ ಇದೆ. ಅದರಲ್ಲೂ ಮಹಿಳಾ ಸಿಬ್ಬಂಂದಿ ಅಧಿಕ ಇರುವುದರಿಂದ ರಾತ್ರಿ ಈ ಅಕ್ರಮ ನಿಯಂತ್ರಣ ಅಸಾಧ್ಯ ಎನ್ನುತ್ತಾರೆ. ‘ಯಾವ ಹೊಲದಲ್ಲಿ ಯಾವ ಬೆಳೆ ಬಿತ್ತಲಾಗಿದೆ ಎಂದು ಗ್ರಾಮ ಲೆಕ್ಕಾಧಿಕಾರಿ ಸಮೀಕ್ಷೆ ಮಾಡುತ್ತಾರೆ. ಎಲ್ಲಿ ಅಕ್ರಮ ಮಣ್ಣು ಎತ್ತಲಾಗುತ್ತಿದೆ ಎಂಬುದು ಕಂದಾಯ ಅಧಿಕಾರಿಗಳಿಗೆ ತಿಳಿದಿದ್ದು, ಅವರು ಮಾಹಿತಿ ನೀಡಿ, ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಅಧಿಕಾರಿಗಳು ಹೇಳುತ್ತಾರೆ.

ಕಳಸಾಪುರ ಗ್ರಾಪಂ ಪ್ರಕರಣದಲ್ಲಿ ಸಂಪೂರ್ಣ ವಿಲವಾಗಿದೆ. ಗ್ರಾಮದ ಮುಖ್ಯ ರಸ್ತೆ ಕಿರಿದಾಗಿದ್ದು, ರಸ್ತೆಗೆ ಹೊಂದಿಕೊಂಡಂತೆ ಶಾಲೆ, ಗ್ರಾಪಂ ಇರುವುದರಿಂದ ಮಣ್ಣು ತುಂಬಿದ ಲಾರಿಗಳ ವೇಗದಿಂದ ಅಪಾಯ ತಪ್ಪಿದ್ದಲ್ಲ. ಹಾಗಾಗಿ ಗ್ರಾಮದ ಹಲವಡೆ ವೇಗ ತಡೆಗಳನ್ನು ನಿರ್ಮಿಸುವಂತೆ ಕಳೆದ ಜನವರಿ ಹಾಗೂ ಆಗಸ್ಟ್ ತಿಂಗಳಲ್ಲಿ ಎರಡು ಬಾರಿ ಕಳಸಾಪುರ ಗ್ರಾಪಂ ಅಧಿಕಾರಿಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪಿಡಬ್ಲುೃಡಿ ಇಲಾಖೆಗೆ ಪತ್ರ ಬರೆದು ಕೈತೊಳೆದುಕೊಂಡಿದ್ದಾರೆ. ಆದರೆ, ಗ್ರಾಮದಲ್ಲಿ ಸಂಚರಿಸುವ ಲಾರಿಗಳಿಂದ ಕಂದಾಯ ಕಟ್ಟಿಸಿಕೊಳ್ಳಲು ವಿಲರಾಗಿದ್ದಾರೆ.

ಮಣ್ಣನ್ನು ಜೇಬಿನಲ್ಲಿ, ಬ್ಯಾಗಿನಲ್ಲಿ ಮುಚ್ಚಿಟ್ಟು ಸಾಗಿಸಲು ಸಾಧ್ಯವಿಲ್ಲ. ಬಹಿರಂಗವಾಗಿಯೇ ಲಾರಿಗಳಲ್ಲಿ ತುಂಬಿ ಸಾಗಿಸಬೇಕು. ಒಂದೇ ಸ್ಥಳದಲ್ಲಿ 19 ಲಕ್ಷ ರೂ. ಮೌಲ್ಯದ ಮಣ್ಣು ಕಾಣೆಯಾಗಿದೆ ಅಂತಾದರೆ ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಹತ್ತಾರು ಕೋಟಿ ರೂ.ಗೂ ಅಧಿಕವಾಗುತ್ತದೆ. I ರವಿಕಾಂತ ಅಂಗಡಿ, ಉತ್ತರ ಮಹಾಸಭಾ ಅಧ್ಯಕ್ಷ ಈಗತಾನೆ ವರ್ಗಾವಣೆ ಆಗಿ ಬಂದಿದ್ದೇನೆ. ನಮ್ಮ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಇಂತಹ ಅಕ್ರಮದ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ಮಾಹಿತಿ ಪಡೆದು ಅಧಿಕಾರಿಗಳಿಗೆ ವರದಿ ನೀಡಲಾಗುವುದು.I ಅರುಣ ಮಂಟೂರು, ಕಂದಾಯ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net