

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗ ನಿವೃತ್ತಿ ಸಮಯವಾಗಿದೆ. ಜನರೇ ಅವರನ್ನು ಮನೆಗೆ ಕಳಿಸಲು ತೀರ್ಮಾನಿಸಿದ್ದಾರೆ ಎಂದು ಸಂಸದ ಎಸ್. ಮುನಿಸ್ವಾಮಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಡ್ರಾಮಾ ಕಂಪನಿ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿದೆ ಎಂದು ದೆಹಲಿಗೆ ತೆರಳಿತ್ತು. ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡಿದ್ದಾರೆ. ಅನುದಾನ ಹಂಚಿಕೆ ವಿಷಯದಲ್ಲಿ ಸಿದ್ದರಾಮಯ್ಯ ಅವರು ಸುಮ್ಮನೆ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ ಎಂದರು.
ಕಾಂಗ್ರೆಸ್‌ನವರ ಗ್ಯಾರಂಟಿಗಳಿಗೆ ವಾರಂಟಿ ಇಲ್ಲ. ಅವು ಅಳುವಿನಂಚಿನಲ್ಲಿವೆ. ಹೀಗಾಗಿ ಇನ್ನಿಲ್ಲದ ಗಿಮಿಕ್ ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ. ಮನೆಗೆ ನೀರು ಬಾರದಿದ್ದರೂ ಮೋದಿಯತ್ತ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಒಂದೇ ಸಮುದಾಯಕ್ಕೆ ಹತ್ತು ಕೋಟಿ ರೂ. ಅನುದಾನ ನೀಡುವ ಮೂಲಕ ದೇಶವನ್ನು ಇಬ್ಬಾಗಿಸುವ ಕಾರ್ಯವನ್ನು ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ. ಇದೇ ಉದ್ದೇಶದಿಂದ ಸಂಸದ ಡಿ.ಕೆ. ಸುರೇಶ ದಕ್ಷಿಣ ಭಾರತದ ವಿಂಗಡನೆ ಬಗ್ಗೆ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು.
ಶೇ. 5ರಷ್ಟು ಜನರಿಗೆ ಮಾತ್ರ ಗ್ಯಾರಂಟಿ ಯೋಜನೆಗಳು ತಲುಪಿವೆ. ಚುನಾವಣೆ ವೇಳೆ ಸಿದ್ದರಾಮಯ್ಯ ನಮ್ಮ ಮನೆಗೆ ಬರಲಿ. ಆಗ ತಕ್ಕ ಉತ್ತರ ನೀಡುತ್ತೇವೆ ಎಂದು ಜನರು ಕಾಯುತ್ತಿದ್ದಾರೆ ಎಂದರು.