

ಬೆಂಗಳೂರು: ಭಾರತೀಯ ಭಾಷೆಗಳ ಜೀವಾಳ ಮಾತುಗಳಲ್ಲಿದೆ. ಬರವಣಿಗೆಯಲ್ಲಿ ಕೃತಕತೆ ಹೆಚ್ಚಾಗಿರುತ್ತದೆ. ಆದರೆ ಮಾತಿನಲ್ಲಿ ಪ್ರೀತಿ, ಕಕ್ಕುಲಾತಿ ಇರುತ್ತದೆ. ಭಾಷೆಯನ್ನು ಶ್ರೀಮಂತಗೊಳಿಸುವವರು ಗ್ರಾಮೀಣ ಜನರು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ್ ಕಂಬಾರ ಹೇಳಿದ್ದಾರೆ.
ಕಬ್ಬನ್‌ಪಾರ್ಕ್‌ನ ಸರ್ಕಾರಿ ನೌಕರರ ಸಂಘದದಲ್ಲಿ ಭಾವಜೀವಿ ಡಾ. ಬಿ.ಎಸ್. ಮಂಜುನಾಥ್‌ರ ಯೋಗಪಥ ಕಾದಂಬರಿ ಬಿಡುಗಡೆ ಮಾಡಿ ಮಾತನಾಡಿದರು.
ಭಾರತೀಯರಾದ ನಾವು ಪ್ರೀತಿಯಿಂದ ಮಾತನಾಡುತ್ತೇವೆ. ಬೇರೆ ದೇಶಗಳಲ್ಲಿ ಮಾತಿನ ಜೊತೆಗೆ ಬರವಣಿಗೆಯನ್ನು ರೂಢಿಸಿಕೊಂಡಿರುತ್ತಾರೆ. ಬರವಣಿಗೆ, ಮಾತಿನ ಭಾಷೆ ಬೇರೆ ಬೇರೆ. ಬರವಣಿಗೆಯಲ್ಲಿ ಅನೇಕ ಬಾರಿ ವಿಷಯಗಳನ್ನು ತಿಳಿಸಿರುತ್ತೇವೆ. ನಮ್ಮ ಎಲ್ಲಾ ಭಾಷೆಗಳಲ್ಲಿ ಬರವಣಿಗೆ ಜೊತೆಗೆ ಮಾತಿನ ಭಾಷೆಯೂ ಇದೆ. ಆದರೆ ಪ್ರತ್ಯಯಗಳು, ಕ್ರಿಯಾ ಪದಗಳು ಸ್ವಲ್ಪ ಭಿನ್ನವಾಗಿರುತ್ತವೆ ಎಂದರು. ಮಾತಿನ ಭಾಷೆಗೆ ಕಾಳಜಿ ಜಾಸ್ತಿ. ಹಳ್ಳಿ ಜನರ ಭಾಷೆ ಕಾವ್ಯಾತ್ಮಕವಾಗಿರುತ್ತದೆ. ಹಳ್ಳಿಯವರು ಭಾಷೆಯನ್ನು ಸೃಷ್ಟಿಸುತ್ತಾರೆ. ಆದ್ದರಿಂದ ಗ್ರಾಮೀಣ ಸೊಗಡಿನ ಭಾಷೆ ಅತ್ಯಂತ ಶ್ರೀಮಂತವಾದದ್ದು. ಎಂದು ಡಾ. ಕಂಬಾರ ವಿವರಿಸಿದರು.
ಸಮಾರಂಭದಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪ್ರಥಮ ಅಧ್ಯಕ್ಷ ಡಾ. ಪ್ರದಾನ ಗುರುದತ್ತ, ಸಾರಿಗೆ ಇಲಾಖೆ ಕಾರ್ಯದರ್ಶಿ ಡಾ.ಎನ್.ವಿ. ಪ್ರಸಾದ್, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ, ಉಪಾಧ್ಯಕ್ಷ ಎ.ಎಸ್. ಹರ್ಷ ಮತ್ತಿತರರು ಉಪಸ್ಥಿತರಿದ್ದರು.
"ಪುಸ್ತಕ ಓದುವುದೇ ಒಂದು ಅನುಭೂತಿ. ಜ್ಞಾನಾರ್ಜನೆ ಆನಂದದಾಯಕವಾದದ್ದು. ದೊಡ್ಡವರು ಪುಸ್ತಕ ಓದುವುದನ್ನು ರೂಢಿಸಿಕೊಂಡರೆ ಮಕ್ಕಳು ಅದನ್ನು ಅನುಸರಿಸುತ್ತಾರೆ." -ಪ್ರಿಯಾಂಕ ಉಪೇಂದ್ರ, ಚಿತ್ರನಟಿ