ಚನ್ನರಾಯಪಟ್ಟಣ: ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ಕಲಿಸುವ ಜವಬ್ದಾರಿ ಪಾಲಕರದ್ದು ಎಂದು ಕುವೆಂಪು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೋಮಲಾ ಶಿವಸ್ವಾಮಿ ಹೇಳಿದರು.
ಪಟ್ಟಣದ ಟೈಮ್ಸ್ ಪಿಯು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ, ಸಾಂಪ್ರದಾಯಿಕ ದಿನ ಹಾಗೂ ಆಹಾರಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಅಚಲಗುರಿಯೊಂದಿಗೆ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಕಲಿಕೆಗೆ ಹಿಂದಿನಷ್ಟು ಕಷ್ಟ ಪಡುವ ಸನ್ನಿವೇಶ ಈಗಿನ ಕಾಲಘಟ್ಟದಲ್ಲಿ ಇಲ್ಲ. ಇರುವ ಅವಕಾಶಗಳನ್ನು ಸದ್ಬಳಕೆಮಾಡಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.
ಪುರಸಭಾ ಸದಸ್ಯ ಸಿ.ಎನ್. ಶಶಿಧರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಪ್ರಕೃತಿಬಗ್ಗೆ ಕಾಳಜಿ ಹೊಂದುವುದರ ಜತೆಗೆ ಗಿಡವನ್ನು ನೆಟ್ಟು ಪೋಷಿಸಬೇಕು. ಹಳ್ಳಿಯ ಸಾಂಪ್ರದಾಯಿಕ ಆಹಾರ ಪದ್ಧತಿಗಳ ಬಗ್ಗೆ ಜ್ಞಾನ ಹೊಂದುವ ಮೂಲಕ ಅವುಗಳನ್ನು ಉಳಿಸಿ ಪೋಷಿಸಬೇಕು ಎಂದು ಹೇಳಿದರು.
ಆಹಾರ ಮೇಳ ಉದ್ಘಾಟಿಸಿ ಮಾತನಾಡಿದ ಟೈಮ್ಸ್ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಬಿ.ಕೆ.ಗಂಗಾಧರ್, ಕನ್ನಡ ನಾಡು, ನುಡಿ, ನೆಲ, ಜಲದ ಬಗ್ಗೆ ಪ್ರತಿಯೊಬ್ಬರೂ ಗೌರವ ಹೊಂದಿರಬೇಕು. ಅನ್ಯ ಭಾಷೆಗಳ ಭರಾಟೆಯಲ್ಲಿ ಕನ್ನಡವನ್ನು ಕಡೆಗಣಿಸಬಾರದು ಎಂದರು.
ಸಂಸ್ಥೆಯ ಅಧ್ಯಕ್ಷ ಎ.ಬಿ.ಸುರೇಂದ್ರಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಐಚ್ಛಿಕ ವಿಷಯದ ಜತೆಗೆ ಭಾಷಾ ವಿಷಯಕ್ಕೂ ಒತ್ತು ನೀಡಬೇಕು ಎಂದು ಹೇಳಿದರು.
ಸಾಂಪ್ರದಾಯಿಕ ದಿನದ ಅಂಗವಾಗಿ ವಿದ್ಯಾರ್ಥಿಗಳು, ಉಪನ್ಯಾಸಕರು ವಿಶೇಷ ಉಡುಗೆಯಲ್ಲಿ ಬಂದಿದ್ದರು. ಆಹಾರ ಮೇಳದಲ್ಲಿ ವಿದ್ಯಾರ್ಥಿಗಳೇ ಸಿದ್ಧಪಡಿಸಿದ ಖಾದ್ಯಗಳ ವ್ಯಾಪಾರ ಜೋರಾಗಿ ನಡೆಯಿತು. ಪ್ರಾಂಶುಪಾಲ ಶ್ರೀಕಂಠು ಬೋಧಕ ವೃಂದ ಇದ್ದರು.