ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ

mm 4-4
Published on

ವಿಜಯಪುರ:ದೇಶದಲ್ಲಿ ಗೃಹ ಕಾರ್ಮಿಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿದೆ. ಆದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸದ್ಯದವರೆಗೆ ಯಾವುದೇ ಸೌಲಭ್ಯ ಒದಗಿಸದಿರುವುದು ಬೇಸರದ ಸಂಗತಿ ಎಂದು ಬೆಂಗಳೂರಿನ ಸಂತ ಜೋಸೆಫ್​ ಕಾನೂನು ಕಾಲೇಜಿನ ನಿರ್ದೇಶಕ ಫಾದರ್​ ಜೆರಾಲ್ಡ್​ ಡಿಸೋಜಾ ಹೇಳಿದರು.

ಅನೌಪಚಾರಿಕ ಶಿಕ್ಷಣ ಸಂಸ್ಥೆ ಹಾಗೂ ಗೃಹ ಕಾರ್ಮಿಕರ ಯೂನಿಯನ್​ಗಳ ಸಂಯುಕ್ತಾಶ್ರಯದಲ್ಲಿ ನಗರದ ಸಂತ ಅನ್ನಮ್ಮನವರ ದೇವಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ಗೃಹ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಗಳು ಗೃಹ ಕಾರ್ಮಿಕರನ್ನು ಅಸಂಟಿತ ವಲಯದ ಕಾರ್ಮಿಕರೆಂದು ಪರಿಗಣಿಸಿ ಅವರಿಗೆ ಸೌಲಭ್ಯ ಕೊಡಬೇಕಾಗಿದೆ. ಕನಿಷ್ಠ ವೇತನ, ರಜೆ ಸೌಲಭ್ಯ, ಭದ್ರತಾ ಸೌಲಭ್ಯ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ನಿಮ್ಮ ಹೋರಾಟ ನಿರಂತರವಾಗಿರಲಿ ಎಂದು ತಿಳಿಸಿದರು.

ಕಾರ್ಮಿಕ ಅಧಿಕಾರಿ ಜಗದೇವಿ ಸಜ್ಜನ ಮಾತನಾಡಿ, ಕಾರ್ಮಿಕ ಇಲಾಖೆಯಲ್ಲಿ ಗೃಹ ಕಾರ್ಮಿಕರಿಗೆ ಪ್ರತ್ಯೇಕ ಸೌಲಭ್ಯಗಳಿಲ್ಲ. ಆದರೆ. ಅಂಬೇಡ್ಕರ್​ ಸಹಾಯ ಹಸ್ತ ಯೋಜನೆಯಡಿ ನೋಂದಣಿ ಮಾಡಿಕೊಂಡು ಕಾರ್ಡ್​ ಪಡೆದರೆ ಅವರಿಗೆ ಅಪಘಾತದ ವಿಮೆ ಒಂದು ಲಕ್ಷದ ವರೆಗೆ, ಮರಣ ವಿಮೆ ಒಂದು ಲಕ್ಷ ಹಾಗೂ ಆಸ್ಪತ್ರೆ ವೆಚ್ಚ ಐವತ್ತು ಸಾವಿರದವರೆಗೆ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.

ಅನೌಪಚಾರಿಕ ಶಿಕ್ಷಣ ಸಂಸ್ಥೆ ನಿರ್ದೇಶಕ ಫಾದರ್​ ಕೆವಿನ್​ ಸಿಕ್ವೇರಾ ಮಾತನಾಡಿ, ನಮ್ಮ ಅನೌಪಚಾರಿಕ ಶಿಕ್ಷಣ ಸಂಸ್ಥೆಯು ಹಲವು ವರ್ಗದ ಜನರಿಗಾಗಿ ಅವರ ಹಕ್ಕುಗಳನ್ನು ಪಡೆಯಲು ನಿರಂತರ ಶ್ರಮಿಸುತ್ತಿದೆ ಎಂದರು.

ನಗರ ಗೃಹ ಕಾರ್ಮಿಕರ ಯೂನಿಯನ್​ ಅಧ್ಯಕ್ಷ ಫರ್ಜಾನಾ ಜಮಾದಾರ ಅಧ್ಯಕ್ಷತೆ ವಹಿಸಿದ್ದರು. ಅತಿಥಿ ಸಿಸ್ಟರ್​ ಜಯಾ ಮೇರಿ ಉಪಸ್ಥಿತರರಿದ್ದರು. ನಗರದ ವಿವಿಧ ಸ್ಲಂಗಳಿಂದ 200ಕ್ಕಿಂತ ಅಧಿಕ ಗೃಹ ಕಾರ್ಮಿಕರು ಭಾಗವಹಿಸಿದ್ದರು.

ರೇಣುಕಾ ಕೋಟ್ಯಾಳ ಸ್ವಾಗತಿಸಿದರು. ಜಯಶ್ರೀ ಚಲವಾದಿ ನಿರೂಪಿಸಿದರು. ಮೀನಾ ಶಿಂಗೆ ವಂದಿಸಿದರು.

ವಿಜಯಪುರದ ಸಂತ ಅನ್ನಮ್ಮನವರ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಗೃಹ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಫಾ. ಜೆರಾಲ್ಡ್​ ಡಿಸೋಜಾ, ಜಗದೇವಿ ಸಜ್ಜನ, ಫರ್ಜಾನಾ ಜಮಾದಾರ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net