

ತಿ.ನರಸೀಪುರ: ತಾಲೂಕಿನ ಶೈಕ್ಷಣಿಕ ಪ್ರಗತಿ ಮತ್ತು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಕಲಿಕೆ ಮುಖ್ಯವಾಹಿನಿಗೆ ತರುವುದು ಪ್ರತಿಯೊಬ್ಬ ಶಿಕ್ಷಕರ ಜವಾಬ್ದಾರಿ ಎಂದು ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೂರ್ತಿ ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ನಿಯೋಜನೆಗೊಂಡ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಎಸ್ಸಿ/ಎಸ್ ಟಿ ಪ್ರಾಥಮಿಕ, ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಶಿಕ್ಷಣದ ಪ್ರಗತಿ ಮತ್ತು ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ಕಾರ್ಯಭಾರವನ್ನು ಶಿಕ್ಷಕರಾದವರು ಅಚ್ಚುಕಟ್ಟಾಗಿ ನಿಭಾಯಿಸಬೇಕು. ಸಾಮಾಜಿಕ ಪ್ರಗತಿಗೆ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಯ ಮೇಲೆ ಅವಲಂಬನೆಯಾಗಿದೆ ಎಂದರು.
ಸಂಘದ ಅಧ್ಯಕ್ಷ ಎಸ್.ನಾಗೇಶ್ ಮಾತನಾಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಶಿಕ್ಷಕರೆಲ್ಲರೂ ಉತ್ತಮವಾಗಿ ಶ್ರಮಿಸುವುದರಿಂದ ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಗೆ ತಾಲೂಕು ಪ್ರಥಮ ಸ್ಥಾನದಲ್ಲಿತ್ತು. ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಪಾಠಗಳನ್ನು ಮಕ್ಕಳಿಗೆ ಹೇಳಿಕೊಡುತ್ತಿದ್ದೇವೆ. ಸಂಘದ ಚಟುವಟಿಕೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಪ್ರೋತ್ಸಾಹಿಸಿ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಸಂಘದ ಉಪಾಧ್ಯಕ್ಷ ಕೆ.ನಾಗರಾಜು, ಪ್ರಧಾನ ಕಾರ್ಯದರ್ಶಿ ಸಿ.ಮಹದೇವಸ್ವಾಮಿ, ಸಹ ಕಾರ್ಯದರ್ಶಿಗಳಾದ ಸೋಮಶೇಖರ, ಸಿ.ಆರ್.ರಾಜಪ್ಪ, ಸಂಘಟನಾ ಕಾರ್ಯದರ್ಶಿಗಳಾದ ಆರ್.ನಾಗೇಂದ್ರ, ಸಿ.ಸುರೇಶ್, ಎಸ್.ಭಾಗ್ಯಮ್ಮ, ಖಜಾಂಚಿ ಬಸವರಾಜು ಹಾಗೂ ನಿರ್ದೇಶಕರು ಹಾಜರಿದ್ದರು.