ವಿದ್ಯಾರ್ಥಿಗಳ ಜೀವನ ಸುಧಾರಿಸುವ ಜವಾಬ್ದಾರಿ ಶಿಕ್ಷಕರದ್ದು

6 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಶಿಕ್ಷಕರು ವಿದ್ಯಾರ್ಥಿಗಳ ಜೀವನ ಹಾಗೂ ಅವರ ವಿಚಾರಧಾರೆ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಪಾಠ ಬೋಧಿಸುವುದರ ಜತೆಗೆ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸ್ಥೈರ್ಯ, ಧೈರ್ಯ, ಸದ್ಗುಣ ತುಂಬಬೇಕಾಗುತ್ತದೆ. ಅದು ಆದರ್ಶ ಗುರುಗಳ ಕರ್ತವ್ಯ ಹಾಗೂ ಜವಾಬ್ದಾರಿ ಎಂದು ಜೆಎಸ್‌ಎಸ್ ಐಟಿಐ ಪ್ರಾಚಾರ್ಯ ಮಹಾವೀರ ಉಪಾಧ್ಯೆ ಹೇಳಿದರು.
ಜಿಪಂ, ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಹಾಗೂ ಜೆಎಸ್‌ಎಸ್‌ನ ಶ್ರೀ ಮಂಜುನಾಥೇಶ್ವರ ಪದವಿ ಪೂರ್ವ ಕಲಾ ಮತ್ತು ವಾಣಿಜ್ಯ ಕಾಲೇಜಿನ ಆಶ್ರಯದಲ್ಲಿ ಜಿಲ್ಲೆಯ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಿಗೆ ಜೆಎಸ್‌ಎಸ್ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಆದರ್ಶ ಗುರುಗಳನ್ನು ನೇಮಿಸಿಕೊಳ್ಳುವ ಹಾಗೂ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಪೂರಕ ಚಟುವಟಿಕೆ ರೂಪಿಸುವ ಜವಾಬ್ದಾರಿ ಸಂಸ್ಥೆ ಮುಖ್ಯಸ್ಥರ ಮೇಲಿರುತ್ತದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಜೆಎಸ್‌ಎಸ್ ಸಂಸ್ಥೆ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಪಾಲಕರಿಗೆ ಮತ್ತು ಪ್ರಾಚಾರ್ಯರಿಗೆ ಪ್ರತ್ಯೇಕ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಡಾ. ರವಿಕುಮಾರ ಬಾರಾಟಕ್ಕೆ ಮಾತನಾಡಿ, ಈಗಾಗಲೇ ಇಲಾಖೆ ಮೂಲಕ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಪರಿಣಾಮಕಾರಿಯಾಗಿ ಕೈಗೊಂಡ ವಿವಿಧ ಯೋಜನೆಗಳನ್ನು ವಿವರಸಿದರು.
ಪ್ರದೀಪ್ ಆಚಾರ್ಯ ಮಾತನಾಡಿ, ವಿದ್ಯಾರ್ಥಿಗಳು ಕಡಿಮೆ ಸಮಯದಲ್ಲಿ ಹೆಚ್ಚು ಓದುವುದು, ಅಧ್ಯಾಯನಕ್ಕೆ ಗಮನ ಕೇಂದ್ರೀಕರಿಸುವುದು ಮತ್ತು ಪರೀಕ್ಷಾ ಭಯದಿಂದ ದೂರವಾಗುವ ಸುಲಭ ಮಾರ್ಗ, ಕೌಶಲ್ಯಗಳನ್ನು ತಿಳಿಸಿದರು.
ಅಶೋಕ ಸಿಂದಗಿ, ಆರ್.ಆರ್. ಸದಲಗಿ, ಪ್ರಾಚಾರ್ಯ ಡಾ. ಬಿ.ಎನ್. ಭಾವಿ, ಡಾ. ಅರುಣ ಕುಮಾರ ಶಿರಹಟ್ಟಿ, ಇತರರು ಇದ್ದರು. ಜ್ಯೋತಿ ಮಾಚಕ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net