

ಗಲಗಲಿ: ಲೇಖಕರನ್ನು ಬೆಳೆಸುವುದು ಸಮಾಜದ ಕರ್ತವ್ಯವಷ್ಟೇ ಅಲ್ಲ, ಅದು ಜವಾಬ್ದಾರಿ. ಉತ್ತಮ ಲೇಖಕರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿದಾಗ ಅವರಿಂದ ಇನ್ನೂ ಉತ್ತಮ ಕೃತಿಗಳನ್ನು ನಿರೀಕ್ಷಿಸಲು ಸಾಧ್ಯ ಎಂದು ಬೆಂಗಳೂರಿನ ಹಿರಿಯ ಸಾಹಿತಿ ಕಂನಾಡಿಗ ನಾರಾಯಣ ಅಭಿಪ್ರಾಯಪಟ್ಟರು.
ಗಲಗಲಿ ಗ್ರಾಮದ ಗಾಲವ ಶಿಕ್ಷಣ ಸಂಸ್ಥೆಯ ನ್ಯೂ ಇಂಗ್ಲಿಷ್ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ 2024ನೇ ಸಾಲಿನ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಶಸ್ತಿ ಲೇಖಕನನ್ನು ನೋಡಿ ಕೊಡದೆ ಅವನ ಕೃತಿಗಳ ಗುಣಮಟ್ಟವನ್ನು ನೋಡಿ ಕೊಟ್ಟಾಗ ಮಾತ್ರ ಪ್ರಶಸ್ತಿಗಳಿಗೆ ಮೌಲ್ಯ ಸಿಗಲು ಸಾಧ್ಯ ಎಂದರು.
ಮುಧೋಳದ ಚಿಂತನ ಸಿರಿ ಅಧ್ಯಕ್ಷ ಡಾ. ಶಿವಾನಂದ ಕುಬಸದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಹಿತ್ಯದಲ್ಲಿ ಹೊಸ ಲೇಖಕರು ಬರುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಕಾರ್ಯಕ್ರಮದಲ್ಲಿ ರಾಚು ಕೊಪ್ಪ, ಮುರ್ತುಜಾಬೇಗಂ ಕೊಡಗಲಿ, ಡಾ. ಪ್ರಕಾಶ ನರಗುಂದ, ನೀ ಶ್ರೀಶೈಲ, ನವ್ಯ ಆರ್. ಕತ್ತಿ, ಮಹಾಂತೇಶ ಪಾಟೀಲ, ಮಲ್ಲಿಕಾರ್ಜುನ ಶೆಲ್ಲಿಕೇರಿ, ಚಂದ್ರಶೇಖರ ಹೆಗಡೆ, ಪ್ರಕಾಶ ವಸದ, ಡಾ. ತಿಪ್ಪೇಸ್ವಾಮಿ ಡಿ.ಎಸ್. ಸಂಗಮೆಶ ಅಟಗಾಳಿ, ಡಾ. ಸದಾಶಿವ ದೊಡಮನಿ, ಗಿರಿಜಾ ಪಾಟೀಲ, ಅನೀಲ ಗುನ್ನಾಪೂರ, ಡಾ. ಸಿಂ.ಎಂ. ಜೋಶಿ, ಮಲ್ಲಿಕಾರ್ಜುನ ಹುಲಗಬಾಳಿ, ಎಲ್.ಪಿ. ಕುಲಕರ್ಣಿ, ಸುರೇಶ ರಾಜಮಾನೆ, ಚೇತನ ನಾಗರಾಳ, ಕಿರಸೂರ ಗಿರಿಯಪ್ಪ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರನ್ನ ಪ್ರತಿಷ್ಠಾನದ ಸದಸ್ಯ ಡಾ. ಕೆ.ಎಲ್ ಉದಪುಡಿ ಅಭಿನಂದನಾ ನುಡಿಗಳನ್ನಾಡಿದರು. ಶಿವಾನಂದ ಶೆಲ್ಲಿಕೇರಿ ಅಧ್ಯಕ್ಷತೆ ವಹಿಸಿ ಕಸಾಪದ ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು. ಸಹಕಾರಿ ಧುರೀಣ ಈರಣ್ಣಗೌಡ ನ್ಯಾಮಗೌಡ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ರಬಕವಿ/ಬನಹಟ್ಟಿ ತಾಲೂಕಾ ಕಸಾಪ ಅಧ್ಯಕ್ಷ ಮ ಕೃ. ಮೇಗಾಡಿ ಹಾಗೂ ಮುಧೋಳ ತಾಲೂಕಾ ಕಸಾಪ ಅಧ್ಯಕ್ಷ ಆನಂದ ಪೂಜಾರಿ, ಬೀಳಗಿ ತಾಲೂಕು ಕಸಾಪ ಅಧ್ಯಕ್ಷ ಗುರುರಾಜ ಲೂತಿ, ಗಲಗಲಿ ವಲಯ ಘಟಕದ ಅಧ್ಯಕ್ಷ ಎಂ.ಪಿ. ಕಾಶಿ ಮತ್ತಿತರರಿದ್ದರು.