ಕ್ರೀಡಾ ಸಂಪನ್ಮೂಲವಾಗಿಸುವುದು ಹೆತ್ತವರ ಜವಾಬ್ದಾರಿ - ಹಾಕಿ ತಂಡದ ಮಾಜಿ ನಾಯಕ ಧನರಾಜ್ ಪಿಳ್ಳೈ ಹೇಳಿಕೆ

Mmg-oct12- swimming
Published on

ಮಂಗಳೂರು: ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಅವರನ್ನು ದೇಶದ ಕ್ರೀಡಾ ಸಂಪನ್ಮೂಲವನ್ನಾಗಿಸುವ ಮಹತ್ತರ ಜವಾಬ್ದಾರಿ ಹೆತ್ತವರದ್ದಾಗಿದೆ ಎಂದು ಭಾರತದ ಹಾಕಿ ತಂಡದ ಮಾಜಿ ನಾಯಕ ಧನರಾಜ್ ಪಿಳ್ಳೈ ಹೇಳಿದರು.

ಮಂಗಳಾ ಸ್ವಿಮ್ಮಿಂಗ್ ಕ್ಲಬ್, ಪನಾಮ ಕಾರ್ಪೋರೇಷನ್ ಸಹಭಾಗಿತ್ವದಲ್ಲಿ ಭಾನುವಾರ ಲೇಡಿಹಿಲ್‌ನ ಮನಪಾ ಈಜುಕೊಳದಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ಮೆಡಲಿಸ್ಟ್ ಹಾಗೂ ನಾನ್ ಮೆಡಲಿಸ್ಟ್ ಈಜು ಸ್ಪರ್ಧೆ ‘ಸ್ವಿಮ್ ಗಾಳ 2025’ ಉದ್ಘಾಟಿಸಿ ಅವರು ಮಾತನಾಡಿದರು.

ಬಾಲ್ಯದಿಂದಲೇ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ನಾನು ತಾಯಿಯ ಹಾಗೂ ಸಹೋದರನ ಪ್ರೋತ್ಸಾಹದಿಂದ ಹಾಕಿ ತಂಡವನ್ನು ಮುನ್ನಡೆಸಲು ಸಾಧ್ಯವಾಯಿತು. ಆದ್ದರಿಂದ ಮಕ್ಕಳು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಮನೆಯವರು ಆಸಕ್ತಿ ವಹಿಸಬೇಕು. ಅವರನ್ನು ದೇಶಕ್ಕೆ ಕೊಡುಗೆ ನೀಡುವಂತೆ ರೂಪಿಸಬೇಕು. ಈ ಮೂಲಕ ಏಕಲವ್ಯ, ಅರ್ಜುನ, ಖೇಲ್ ರತ್ನ ಮೊದಲಾದ ಪ್ರಶಸ್ತಿಗಳನ್ನು ಪಡೆಯುವಂತಾಗಬೇಕು ಎಂದವರು ಹೇಳಿದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮುಖ್ಯ ಅತಿಥಿಯಾಗಿದ್ದರು. ಮಂಗಳೂರಿನಲ್ಲಿ ಈಜು ಕಲಿಕೆಗೆ ವಿಶೇಷ ಅವಕಾಶಗಳು ಲಭ್ಯವಿದೆ. ಮೂರು ಅತ್ಯಾಧುನಿಕ ಈಜುಕೊಳಗಳು ಇಲ್ಲಿವೆ. ಸರ್ಕಾರ ಕೂಡಾ ಈಜುಗಾರಿಕೆಗೆ ಹೆಚ್ಚಿನ ಉತ್ತೇಜನ ನೀಡುತ್ತಿದೆ ಎಂದರು.

ಬೆಂಗಳೂರು ಲಕ್ಷೃನ್ ಸ್ಪೋರ್ಟ್ಸ್ ಅಕಾಡೆಮಿಯ ಸಹ ಸಂಸ್ಥಾಪಕ ಹಾಗೂ ಸಿಇಒ ಜೀವನ್ ಮಹಾದೇವ್ ಮಾತನಾಡಿ, ಈಜು ಜೀವನ ಕೌಶಲ್ಯ ಕಲೆ. ಇದರಲ್ಲಿ ಹೆತ್ತವರ ಶ್ರಮ ಅಡಕವಾಗಿದೆ. ಈಜುಗಾರಿಕೆ ಕರಗತ ಮಾಡಿಕೊಂಡರೆ ವಿಫುಲ ಅವಕಾಶಗಳಿವೆ ಎಂದರು.

ಮಂಗಳಾ ಸ್ವಿಮ್ಮಿಂಗ್ ಕ್ಲಬ್ ಅಧ್ಯಕ್ಷ ಪ್ರಮುಖ್ ರೈ ಅಧ್ಯಕ್ಷತೆ ವಹಿಸಿದ್ದರು. ಮಂಗಳಾ ಈಜು ಕ್ಲಬ್ 35 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಅಂತಾರಾಷ್ಟ್ರೀಯ, ರಾಷ್ಟ್ರ, ರಾಜ್ಯಮಟ್ಟದ ಪದಕ ವಿಜೇತರ ಸಹಿತ 350ಕ್ಕೂ ಅಧಿಕ ಮಂದಿ ಸ್ಪರ್ಧಾಳುಗಳು, 50ಕ್ಕೂ ಮಿಕ್ಕಿ ತೀರ್ಪುಗಾರರು, ಅಧಿಕಾರಿಗಳು ಭಾಗವಹಿಸುತ್ತಿರುವುದು ಸಂತಸ ತಂದಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಪನಾಮ ಕಾರ್ಪೋರೇಶನ್‌ನ ಅಧ್ಯಕ್ಷ ವಿವೇಕ್ ರಾಜ್ ಪೂಜಾರಿ ಶುಭ ಹಾರೈಸಿದರು. ದಕ್ಷಿಣ ಕನ್ನಡ ಸ್ವಿಮ್ಮಿಂಗ್ ಅಸೋಸಿಯೇಶನ್ ಅಧ್ಯಕ್ಷ ಯತೀಶ್ ಬೈಕಂಪಾಡಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ, ಮಂಗಳಾ ಸ್ವಿಮ್ಮಿಂಗ್ ಕ್ಲಬ್ ಕಾರ್ಯದರ್ಶಿ ಶಿವಾನಂದ ಗಟ್ಟಿ, ಕೋಶಾಧಿಕಾರಿ ಧನಂಜಯ ಶೆಟ್ಟಿ, ತರಬೇತುದಾರ ರಾಜೇಶ್ ಖಾರ್ವಿ, ದಿನೇಶ್ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.

ಈಜು ಸ್ಪರ್ಧೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪದಕ ವಿಜೇತರನ್ನು ಗೌರವಿಸಲಾಯಿತು. ಮುಖ್ಯ ಈಜು ತರಬೇತುದಾರ ಶಿಶಿರ್ ಎಸ್. ಗಟ್ಟಿ ಸ್ವಾಗತಿಸಿದರು. ಆಶಾ ಶೆಟ್ಟಿ ವಂದಿಸಿದರು. ಚೈತ್ರಾ ಎಂ.ರಾವ್ ಕಾರ್ಯಕ್ರಮ ನಿರೂಪಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಈಜು ಸ್ಪರ್ಧಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net