

ಮದ್ದೂರು: ಕೃಷಿ ಪ್ರಧಾನವಾದ ಭಾರತದಲ್ಲಿ ರೈತನೇ ಬೆನ್ನೆಲುಬಾಗಿದ್ದು, ಅಂತಹ ರೈತರ ಹಿತಕಾಪಾಡುವುದು ಸರ್ಕಾರಗಳ ಜವಾಬ್ದಾರಿ ಎಂದು ಕೆಂಗೇರಿಯ ವಿಶ್ವ ಒಕ್ಕಲಿಗ ಮಠದ ಪೀಠಾಧ್ಯಕ್ಷರಾದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಸಮಾನ ಮನಸ್ಕರ ವೇದಿಕೆ, ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ಸೋಮನಹಳ್ಳಿ ಎಜುಕೇಷನ್ ಸೊಸೈಟಿಗಳ ಸಹಯೋಗದಲ್ಲಿ ಶನಿವಾರ ತಾಲೂಕಿನ ಸೋಮನಹಳ್ಳಿಯಲ್ಲಿರುವ ಸೋಮನಹಳ್ಳಿ ಎಜುಕೇಷನ್ ಸೊಸೈಟಿ ಆವರಣದಲ್ಲಿ ಆಯೋಜಿಸಿದ್ದ ಕೃಷಿ ಬಿಕ್ಕಟ್ಟು ಪರಿಹಾರ, ಪರ್ಯಾಯ ವಿಚಾರ ಸಂಕಿರಣ - ಕೃಷಿಯ ಉಳಿವು, ಕೃಷಿಕನ ಬೆಳೆವು - ಚಿಂತನ ಮಂಥನ ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕೃಷಿಯಿಂದ ರೈತನಿಗೆ ಸಿಗುವ ಲಾಭ ಕಡಿಮೆಯಾಗುತ್ತಿದೆ. ಹಾಗಾಗಿ ಹೆಚ್ಚು ಲಾಭ ಗಳಿಸಲು ರೈತರು ಸ್ವಂತ ಮಾರುಕಟ್ಟೆ ಕಂಡುಕೊಳ್ಳುವುದು ಸೇರಿದಂತೆ ಹಲವು ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ದುಬಾರಿ ಖರ್ಚುನ್ನು ಕಡಿಮೆಯಾಹಬೇಕಾದರೆ ಕೃಷಿಯಲ್ಲಿ ಸ್ವಂತವಾಗಿ ದುಡಿಯುವುದು ಅಗತ್ಯ. ಇದರಿಂದ ಆದಾಯ ಹೆಚ್ಚಾಗುತ್ತದೆ ಎಂದ ಅವರು, ಸಾವಯವ, ಸಮಗ್ರ ಬೇಸಾಯ ಪದ್ಧತಿ, ಪಾಳೆಕರ್ ಪದ್ಧತಿಯನ್ನು ಅನುಸರಿಸುವುದರ ಜತೆಗೆ ಶೂನ್ಯ ಬಂಡವಾಳದಿಂದ ಅಧಿಕ ಲಾಭ ಗಳಿಸುವತ್ತ ಗಮನಹರಿಸಬೇಕು ಎಂದು ಕರೆ ಕೊಟ್ಟರು.
ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಹಲವಾರು ವರ್ಷಗಳಿಂದ ಗ್ರಾಮೀಣ ಯುವಕರು ನಗರಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ಮತ್ತೆ ಅವರನ್ನು ಹಳ್ಳಿಗಳಿಗೆ ಸೆಳೆಯಲು ಲಾಭದಾಯಕ ಕೃಷಿಯಿಂದ ಸಾಧ್ಯ ಎಂದರು.
ರೈತರು ಇತ್ತೀಚೆಗೆ ಎದುರಿಯತ್ತಿರುವ ಸಮಸ್ಯೆಗಳು ಹಾಗೂ ಅದಕ್ಕೆ ಆಗಬೇಕಾಗಿರುವ ಪರಿಹಾರಗಳ ಕುರಿತು ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಅನ್ನದಾನೇಶ್ವರನಾಥ ಸ್ವಾಮಿಜಿ, ಗೌಡಗೆರೆಯ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಮಲ್ಲೇಶ್ ಗುರೂಜಿ, ವಿಶ್ರಾಂತ ಐಜಿಪಿ ಚಂದ್ರಶೇಖರ್, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ರವಿಕುಮಾರ್, ಎಸ್‌ಐಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಟಿ.ವಿ.ರಾಜು, ಸಂಸ್ಥೆ ಕಾರ್ಯದರ್ಶಿ ಡಾ.ಎಸ್.ಆನಂದ್, ಕೀರಣಗೆರೆ ಜಗದೀಶ್, ರಾಜ್ಯ ರೈತ ಸಂಘದ ಸಿ.ಪುಟ್ಟಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು.