ಜಾನಪದ ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆ; ಶೋಭಾ ಸುಬ್ಬಯ್ಯ

23adarshkdga3
Published on

ಮಡಿಕೇರಿ: ಜಾನಪದ ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆಯಾಗಿದ್ದು, ಆ ನಿಟ್ಟಿನಲ್ಲಿ ಜಾನಪದ ಕಲೆಯ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸುವಂತಾಗಬೇಕು ಎಂದು ಜಿಲ್ಲೆಯ ಹಿರಿಯ ಸಾಹಿತಿ, ಜಾನಪದ ಕಲಾವಿದೆ ಮೊಣ್ಣಂಡ ಶೋಭಾ ಸುಬ್ಬಯ್ಯ ಕರೆ ನೀಡಿದರು.


ನಗರದ ಸರ್ಕಾರಿ ಜೂನಿಯರ್ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಕರ್ನಾಟಕ ಜಾನಪದ ಪರಿಷತ್, ಕೊಡಗು ಜಿಲ್ಲಾ ಜಾನಪದ ಪರಿಷತ್, ಮಡಿಕೇರಿ ತಾಲೂಕು ಜಾನಪದ ಪರಿಷತ್ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ’ವಿಶ್ವ ಜಾನಪದ ದಿನಾಚರಣೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


ಜಾನಪದ ಕಲೆಯಲ್ಲಿ ನಮ್ಮೆಲ್ಲರ ಸಂಸ್ಕೃತಿ ಅಡಗಿದೆ. ಇದನ್ನು ಉಳಿಸಿ ಬೆಳೆಸುವ ಕೆಲಸ ಪ್ರತಿಯೊಬ್ಬರಿಂದಲೂ ಆಗಬೇಕು. ಜಾನಪದ ಗೀತೆಗಳು ಹಳೆಯದಾದರೂ ಕೂಡ ಜಾನಪದ ಗೀತೆಗೆ ಒಂದು ವಿಶಿಷ್ಟ ಶಕ್ತಿ ಇದೆ ಎಂದು ಹೇಳಿದರು.


ಜಾನಪದ ಗೀತೆಯಲ್ಲಿ ಪ್ರತಿಯೊಬ್ಬರ ಶ್ರೀಮಂತ ಸಂಸ್ಕೃತಿಯನ್ನು ಸ್ಮರಿಸಬಹುದಾಗಿದೆ. ಎಲ್ಲರ ಪರಿಪಾಠಗಳನ್ನು ಎಂದಿಗೂ ಮುರಿಯಬಾರದು ಉದ್ಯೋಗ ಶಿಕ್ಷಣ ವಿವಿಧ ಉದ್ದೇಶಗಳಿಗಾಗಿ ಬೇರೆ ಕಡೆಗಳಿಗೆ ಹೋದರೂ ಕೂಡ ನಮ್ಮ ಸಂಸ್ಕೃತಿಯನ್ನು ಎಂದಿಗೂ ಮರೆಯಬಾರದು. ಈ ದೇಶದ ಸಂಸ್ಕೃತಿಗೆ ಸಿಗುವ ಸ್ಥಾನಮಾನ ಬೇರೆ ಎಲ್ಲಿಯೂ ಸಿಗುವುದಿಲ್ಲ ಎಂದು ಹೇಳಿದರು.


ಕರ್ನಾಟಕ ಕನ್ನಡ ಜಾನಪದ ಪರಿಷತ್‌ನ ಜಿಲ್ಲಾ ಅಧ್ಯಕ್ಷ ಕಾವೇರಿ ಪ್ರಕಾಶ್ ಮಾತನಾಡಿ, ಜಾನಪದ ಸಂಸ್ಕೃತಿಯೂ ನಮ್ಮ ಹುಟ್ಟಿನೊಂದಿಗೆ ನಮಗೆ ಅಂಟಿಕೊಂಡು ಬಂದಿದೆ. ಜಾನಪದರು ಕೃಷಿ ಭೂಮಿಯನ್ನು ದೇವರೆಂದು ನೆನೆದು ಹಾಡುತ್ತಿದ್ದರು. ಜಾಗತಿಕ ವಿದ್ಯಾಮಾನದ ಬೆಳವಣಿಗೆಯಲ್ಲಿ ಈ ಮಣ್ಣಿನ ಜಾನಪದ ಸಂಸ್ಕೃತಿಯು ಮರೆಯಾಗುತ್ತಿದೆ. ಇದನ್ನು ಉಳಿಸಿ ಬೆಳೆಸುವ ಕೆಲಸ ನಮ್ಮೆಲ್ಲರ ಹೊಣೆಯಾಗಿದೆ. ಜಾನಪದವೇ ಸತ್ಯ ಜಾನಪದವೇ ನಿತ್ಯ ಎಂದು ಹೇಳಿದರು.


ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ಸರ್ವರನ್ನೂ ಸಮಾನವಾಗಿ ಗೌರವಿಸಬೇಕು. ಆ ಮೂಲಕ ಸಮಾನತೆಯ ಸಮಾಜ ನಿರ್ಮಾಣವಾಗಬೇಕು ಎಂಬುದೇ ಜಾನಪದದ ಮೂಲ ಕಲ್ಪನೆಯಾಗಿದೆ. ಇದನ್ನು ಪರಿಪಾಲಿಸಿ ಯುವಪೀಳಿಗೆಯು ಸಾಮರಸ್ಯದ ಜೀವನಕ್ಕೆ ನಾಂದಿ ಹಾಡುವುದರ ಜತೆಗೆ ಕುಟುಂಬ, ಪೋಷಕರು, ಶಿಕ್ಷಕರಿಗೆ ಗೌರವ ನೀಡಬೇಕೆಂದು ಕರೆ ನೀಡಿದರು.


ಕಾರ್ಯಕ್ರಮದಲ್ಲಿ ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಿಗ್ಗಾಲು ಗ್ರಾಮದ ರಜನಿ ರಂಜಿತ್ ಅವರನ್ನು ಮಡಿಕೇರಿ ನಗರಸಭೆಯ ಉಪಾಧ್ಯಕ್ಷೆ, ಮಡಿಕೇರಿ ತಾಲೂಕು ಜಾನಪದ ಪರಿಷತ್ ನಿರ್ದೇಶಕಿ ಸವಿತಾ ರಾಕೇಶ್ ಮತ್ತು ಜಾನಪದ ಪರಿಷತ್ ಪ್ರಮುಖರು ಸನ್ಮಾನಿಸಿದರು.


ಕಾರ್ಯಕ್ರಮದಲ್ಲಿ ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷ ಎಚ್.ಟಿ.ಅನಿಲ್, ಜಿಲ್ಲಾ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಎಸ್.ಐ.ಮುನೀರ್ ಅಹ್ಮದ್, ಸರ್ವೋದಯ ಸಮಿತಿ ಜಿಲ್ಲಾ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ರೆಡ್‌ಕ್ರಾಸ್ ಸಂಸ್ಥೆಯ ರವೀಂದ್ರ ರೈ, ಖಜಾಂಜಿ ಎಸ್.ಎಸ್.ಸಂಪತ್ ಕುಮಾರ್, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.


ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಜಾನಪದ ಕಲಾವಿದರು ಆಕರ್ಷಕವಾದ ಜಾನಪದ ಗೀತೆ ಹಾಡಿದರು. ಶೋಭಾ ಸುಬ್ಬಯ್ಯರವರು ಬ್ಯಾಂಡ್ ಬಾರಿಸುವುದರೊಂದಿಗೆ ಜನಪದ ಗೀತೆ ಹಾಗೂ ಜನಪದ ಕಲಾವಿದರಾದ ಪ್ರೇಮ ರಾಘವಯ್ಯರವರು ರಾಗಿಕಲ್ಲಿನಲ್ಲಿ ರಾಗಿ ಬೀಸುವ ಮೂಲಕ ಜಾನಪದ ಹಾಡನ್ನು ಹಾಡಿ ಜನಪದ ದಿನಾಚರಣೆಯನ್ನು ಉದ್ಘಾಟಿಸಿದ್ದು ವಿಶೇಷವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net