

ನಂಜನಗೂಡು: ವಿವಿಧ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ನೌಕರರ ಹಿತ ಕಾಪಾಡುವುದು ಸಂಘದ ಜವಾಬ್ದಾರಿ ಎಂದು ಜಿಲ್ಲಾ ಸರ್ಕಾರಿ ನೌಕರ ಸಂಘದ ಮಾಜಿ ಅಧ್ಯಕ್ಷ ಗೋವಿಂದರಾಜು ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಸಂಘ, ತಾಲೂಕು ಘಟಕದ ವತಿಯಿಂದ ಈ ಬಾರಿ ಸರ್ಕಾರಿ ನೌಕರ ಸಂಘಕ್ಕೆ ಆಯ್ಕೆಯಾದ ನೂತನ ನಿರ್ದೇಶಕರಿಗೆ ಸ್ವಾಗತ ಹಾಗೂ ಕಳೆದ ಸಾಲಿನಲ್ಲಿ ಇದ್ದಂತಹ ನಿರ್ದೇಶಕರಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ಈ ಸಾಲಿಗೆ ನಾಮ ನಿರ್ದೇಶಕರಾದವರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ಸರ್ಕಾರಿ ನೌಕರರು ತಮ್ಮ ಕಚೇರಿ ಕೆಲಸಗಳ ನಡುವೆಯೂ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಸಲಹೆ ನೀಡಿದರು.
ರಾಜ್ಯ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ನೌಕರರ ಸಂಘದ ಜೀರ್ಣೋದ್ಧಾರಕ್ಕೆ ಹಾಗೂ ಅಭಿವೃದ್ಧಿಗೆ ಸಹಾಯಧನವನ್ನು ಕೊಡಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಜಿಲ್ಲಾ ಹಾಗೂ ರಾಜ್ಯ ಪರಿಷತ್ ಸದಸ್ಯ ಮಾಲೆಗೌಡ ಮಾತನಾಡಿ, ಪ್ರಸ್ತುತ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಹೆಚ್ಚಿನ ಹೊರೆ ಹಾಗೂ ತೊಂದರೆಗಳು ಉಂಟಾಗುತ್ತಿದೆ. ಇಲಾಖೆಯ ಅಧಿಕಾರಿಗಳು ಏಕಾಏಕಿ ನೌಕರರನ್ನು ಅಮಾನತುಗೊಳಿಸಬಾರದು. ಅವರು ಮಾಡಿರುವ ತಪ್ಪುಗಳನ್ನು ಪರಾಮರ್ಶಿಸಿ ನಂತರ ಅವರ ಮೇಲೆ ಕ್ರಮ ಕೈಗೊಳ್ಳಬೇಕಿದೆ. ಆದರೆ ಉತ್ತಮ ನೌಕರರ ಅಮಾನತು ಪ್ರಕರಣಗಳು ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನೂತನ ನಾಮನಿರ್ದೇಶಿತ ಗೌರವಾಧ್ಯಕ್ಷರಾಗಿ ಧರ್ಮ ರತ್ನಾಕರ, ಹಿರಿಯ ಉಪಾಧ್ಯಕ್ಷರಾಗಿ ಎಚ್.ಎಸ್.ಮಹೇಶ್, ಆರೋಗ್ಯ ಇಲಾಖೆಯ ನಾಗೇಶ್, ಹರೀಶ್, ಸಹಕಾರ್ಯದರ್ಶಿಯಾಗಿ ಎಂ.ಎ. ರಂಗನಾಥ, ಹನುಮಂತರಾಜು ವಿವಿಧ ಇಲಾಖೆಗಳಿಂದ ನಾಮ ನಿರ್ದೇಶನಗೊಂಡರು.
ಇದೇ ಸಂದರ್ಭದಲ್ಲಿ ತಾಲೂಕು ಉಪಾಧ್ಯಾಯರ ಸಹಕಾರ ಸಂಘದ ನೂತನ ಉಪಾಧ್ಯಕ್ಷ ಸತೀಶ್ ದಳವಾಯಿ ಅವರನ್ನು ಗೌರವಿಸಲಾಯಿತು. ಸಂಘದ ಜಿಲ್ಲಾ ಖಜಾಂಚಿ, ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಮೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಧರ್ಮರತ್ನಾಕರ್, ತಾಲೂಕು ನೌಕರರ ಸಂಘದ ಅಧ್ಯಕ್ಷ ಡಾ.ದೀಪು, ಖಜಾಂಚಿ ಅಂಕ ನಾಯಕ, ರಾಜ್ಯ ಪರಿಷತ್ ಸದಸ್ಯ ದೀಪಕ್, ಕಾರ್ಯದರ್ಶಿ ಸಿ.ಕಲ್ಪನಾ, ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ್ ಇತರರು ಇದ್ದರು.