

ತುಮಕೂರು: ನಮ್ಮದು ಜನಪರ ಸರ್ಕಾರ, ಜನರಿಗಾಗಿ ಜಾರಿಗೊಳಿಸಿದ ಯೋಜನೆಗಳು ಜನರಿಗೆ ತಲುಪಿವೆ. ಹಾಗಾಗಿ, ಜನರ ಮಧ್ಯೆ ಕಾರ್ಯಕ್ರಮ ಮಾಡುತ್ತಿದ್ದೇವೆ. ಆದರೆ, ಕಾಂಗ್ರೆಸ್ ವ್ಯಕ್ತಿ ಉತ್ಸವ ಮಾಡಲು ಮುಂದಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಲೇವಡಿ ಮಾಡಿದರು.
ಊರ್ಡಿಗೆರೆಯಲ್ಲಿ ಮಂಗಳವಾರ ಆಯೋಜಿಸಿದ್ದ ಜನೋತ್ಸವ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಭಿವೃದ್ಧಿಯ ಡಬಲ್ ಇಂಜಿನ್ ಸರ್ಕಾರ ಬೇಕಾ ಅಥವಾ ಗೊತ್ತು ಗುರಿ ಇಲ್ಲದ ಡಬ್ಬಲ್ ಸ್ಟಿಯರಿಂಗ್ ಸರ್ಕಾರ ಬೇಕಾ ಎಂಬುದನ್ನು ಜನರೇ ನಿರ್ಧರಿಸಲಿದ್ದಾರೆ ಎಂದರು.
ನಮ್ಮದು ಡಬಲ್ ಇಂಜಿನ್ ಸರ್ಕಾರ. ಇದರಿಂದಾಗಿಯೇ ರೈತರು, ಮಹಿಳೆಯರು, ವಿದ್ಯಾರ್ಥಿಗಳು ಸೇರಿ ಎಲ್ಲ ವರ್ಗದ ಜನರಿಗೆ ಹೆಚ್ಚಿನ ಅಭಿವೃದ್ಧಿ ಯೋಜನೆಗಳು ತಲುಪುತ್ತಿವೆ. ಆದರೆ, ಕಾಂಗ್ರೆಸ್‌ನಲ್ಲಿ ಪರಿಸ್ಥಿತಿಯೇ ಭಿನ್ನವಾಗಿದೆ ಎಂದರು.
ಕೆಪಿಸಿಸಿ ಅಧ್ಯಕ್ಷರು ಏರಿಗೆ ಎಳೆದರೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ನೀರಿಗೆ ಎಳೆಯುತ್ತಿದ್ದಾರೆ. ಇಂತಹ ಪಕ್ಷದಿಂದ ಅಭಿವೃದ್ಧಿ ನಿರೀಕ್ಷೆ ಸಾಧ್ಯವೇ? ಜು.28ರಂದು ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಆಯೋಜಿಸಿರುವ ಸಮಾವೇಶದಲ್ಲಿ ಸೇರುವ ಜನಸಾಗರ ಕಂಡು ಬಿಜೆಪಿ ಶಕ್ತಿ ಏನು ಎಂಬುದು ಎಲ್ಲರಿಗೂ ಅರಿವಾಗಬೇಕು. 2023ರ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲು ಸುಲಭವಾಗಲಿದೆ ಎಂದು ಕಾರ್ಯಕರ್ತರಿಗೆ ಹೇಳಿದರು.
ಸಮಾಜ ಒಡೆಯುವುದು ಕಾಂಗ್ರೆಸ್‌ನ ಹುಟ್ಟುಗುಣ, ಒಂದು ಸಮುದಾಯದ ಬೆಂಬಲದಿಂದ ಸಿಎಂ ಆಗಲು ಸಾಧ್ಯವಿಲ್ಲ, ಒಂದು ಸಮುದಾಯವನ್ನು ಮತ್ತೊಂದು ಸಮುದಾಯಕ್ಕೆ ಹೋಲಿಕೆ ಮಾಡುವುದೂ ಶೋಭೆ ತರಲ್ಲ, ಧರ್ಮ ಧರ್ಮದ ಮಧ್ಯೆ, ವರ್ಗ ವರ್ಗಗಳ ಮಧ್ಯೆ, ಜಾತಿ ಜಾತಿಗಳ ಮಧ್ಯೆ ಬಿರುಕು ಮೂಡಿಸುವ.ಕಾಂಗ್ರೆಸ್‌ಗೆ ಪಾಠ ಕಲಿಸಬೇಕಿದೆ ಎಂದರು.
ಮಾಜಿ ಶಾಸಕ ಬಿ.ಸುರೇಶ್‌ಗೌಡ, ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ, ಚಿದಾನಂದ ಎಂ.ಗೌಡ, ಮಧುಗಿರಿ ಜಿಲ್ಲಾಧ್ಯಕ್ಷ ಬಿ.ಕೆ.ಮಂಜುನಾಥ್ ಮತ್ತಿತರರು ಇದ್ದರು.
ರಾಜ್ಯದ ಐದು ಕಡೆಗಳಲ್ಲಿ ಜನೋತ್ಸವ ನಡೆಸಲು ಬಿಜೆಪಿ ಉದ್ದೇಶಿಸಿದೆ, ಮೊದಲ ಕಾರ್ಯಕ್ರಮ ದೊಡ್ಡಬಳ್ಳಾಪುರದಲ್ಲಿ ನಡೆಯಲಿದ್ದು, ಲಕ್ಷಾಂತರ ಜನ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ನಾಲ್ಕು ಜಿಲ್ಲೆಗಳಿಂದ ಆಗಮಿಸುವ ಜನಸಾಗರ ವಿರೋಧ ಪಕ್ಷಗಳಿಗೆ ಎಚ್ಚರಿಕೆ ನೀಡಲಿದೆ.
-ಡಾ.ಕೆ.ಸುಧಾಕರ್ ಆರೋಗ್ಯ ಸಚಿವ
ಅವರ ಆಸೆ ಈಡೇರದು…
ಕೊರಟಗೆರೆ: ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿರುವುದರಿಂದ ಅಭಿವೃದ್ಧಿ ಕೆಲಸಗಳು ಉತ್ತಮವಾಗಿ ನಡೆಯುತ್ತಿವೆ ಎಂದು ಆರೋಗ್ಯ ಸಚಿವ ಡಿ.ಸುಧಾಕರ್ ಹೇಳಿದರು.
ಪಟ್ಟಣದ ಖಾಸಗಿ ಹೋಟೆಲ್ನಲ್ಲಿ ಮಂಗಳವಾರ ಬಿಜೆಪಿ ಆಯೋಜಿಸಿರುವ ಸಾಧನ ಸಮಾವೇಶ ಮತ್ತು ಸಬಲೀಕರಣ ಕಾರ್ಯಕ್ರಮಕ್ಕೆ ಕಾರ್ಯಕರ್ತರ ಆಹ್ವಾನ ಸಭೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಹವಣಿಸುತ್ತಿದ್ದು, ಅವರ ಆಸೆ ಈಡೇರುವುದಿಲ್ಲ. ಸಿಎಂ ಬೊಮ್ಮಾಯಿ ಒಂದು ವರ್ಷದಿಂದ ರಾಜ್ಯದಲ್ಲಿ ಮಾಡಿರುವಂತಹ ಸಾಧನೆಗಳನ್ನು ಜನರಿಗೆ ತಿಳಿಸುವುದು. ಚಿಕ್ಕಬಳ್ಳಾಪುರ ಮತ್ತು ಮಧುಗಿರಿ ಉಪವಿಭಾಗದಲ್ಲಿ ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಿದ್ದು, ಕ್ಷೇತ್ರದಲ್ಲಿ ಶಾಸಕರಿಲ್ಲ. ಆದರೆ ಕಾರ್ಯಕರ್ತರೆಲ್ಲರೂ ಸಾಮೂಹಿಕ ನಾಯಕತ್ವದಲ್ಲಿ ಬರಬೇಕು ಎಂದರು. ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಕೆ.ಮಂಜುನಾಥ್ ಮಾತನಾಡಿ, ಮಧುಗಿರಿ ಉಪವಿಭಾಗ ಬಿಜೆಪಿಗೆ ಶಾಪಗ್ರಸ್ತ ಕ್ಷೇತ್ರಗಳಾಗಿದ್ದು, ಶಿರಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ತೋರಿಸಿದ್ದೇವೆ. ಅದೇ ರೀತಿ ಪಾವಗಡ, ಮಧುಗಿರಿ, ಕೊರಟಗೆರೆಯಲ್ಲಿ ಕಾರ್ಯಕರ್ತರು ಶಾಪದಿಂದ ಮುಕ್ತಗೊಳ್ಳಬೇಕು ಎಂದರೆ ಬಿಜೆಪಿ ಅಭ್ಯರ್ಥಿ ಗೆಲ್ಲಿಸಬೇಕು ಎಂದರು.
ಶಾಸಕ ಡಾ.ರಾಜೇಶ್‌ಗೌಡ, ವಿಧಾನ ಪರಿಷತ್ ಸದಸ್ಯ ಎಂ.ಚಿದಾನಂದ ಗೌಡ, ಮಾಜಿ ಶಾಸಕ ಗಂಗಹನುಮಯ್ಯ, ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಎಸ್.ಪವನ್ ಕುಮಾರ್, ಕಾರ್ಯದರ್ಶಿ ಬಿ.ಕೆ.ಗುರುದತ್, ಜಿಪಂ ಮಾಜಿ ಅಧ್ಯಕ್ಷ ವೈ.ಎಚ್ ಹುಚ್ಚಯ್ಯ, ಮಧುಗಿರಿ ಜಿಲ್ಲಾ ಕಾರ್ಯದರ್ಶಿ ತಿಮ್ಮಜ್ಜ, ವಿಜಯಶಂಕರ್, ಪಪಂ ಮಾಜಿ ಸದಸ್ಯೆ ಸುಶೀಲಮ್ಮ, ಎಲೆರಾಂಪುರ ಗ್ರಾಪಂ ಉಪಾಧ್ಯಕ್ಷ ಉಮೇಶ್ ಚಂದ್ರ ಇದ್ದರು.
ಸೋತು ಮೂಲೆ ಸೇರಿದ ಮೊಯ್ಲಿ: ತುಮಕೂರಿನಲ್ಲಿ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಡಾ.ಕೆ.ಸುಧಾಕರ್, ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇಲ್ಲ, ಪ್ಯಾರಾ ಮೆಡಿಕಲ್ ಮತ್ತು ನರ್ಸಿಂಗ್ ಸಿಬ್ಬಂದಿ ಕೊರತೆ ಇದ್ದು, ಈ ಬಗ್ಗೆ ಆರ್ಥಿಕ ಇಲಾಖೆಯೊಂದಿಗೆ ಚರ್ಚೆ ನಡೆಸಲಾಗಿದೆ. ಶೀಘ್ರದಲ್ಲಿಯೇ ಅಗತ್ಯ ಸಿಬ್ಬಂದಿ ನೇಮಕವಾಗಲಿದೆ ಎಂದು ಭರವಸೆ ನೀಡಿದರು. ಬಿಜೆಪಿ ಅಭಿವೃದ್ಧಿ ಮಾಡದೆ ಸಮಾವೇಶ ಮಾಡುತ್ತಿದೆ ಎಂಬ ಮಾಜಿ ಸಿಎಂ ವೀರಪ್ಪಮೊಯ್ಲಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಮೊಯ್ಲಿ ಆರೋಪ ಕಾಂಗ್ರೆಸ್‌ಗೆ ಅನ್ವಯಿಸುತ್ತದೆ, ಮೊಯ್ಲಿ ಸೋತು ಮೂಲೆ ಸೇರಿದ್ದಾರೆ. ಹಾಗಾಗಿ, ಅವರ ಆರೋಪ ಅವರ ಪಕ್ಷಕ್ಕೆ ಮತ್ತು ಅವರಿಗೆ ಸೂಕ್ತ ಎಂದು ತಿರುಗೇಟು ನೀಡಿದರು.
ಕೊರಟಗೆರೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಲು ಮೂವರು ಇದ್ದಾರೆ ಎನ್ನುವ ಮಾಹಿತಿ ಇದೆ. ಯಾರೇ ಅಭ್ಯರ್ಥಿಯಾದರೂ ಅಭ್ಯರ್ಥಿ ಪರ ಕೆಲಸ ಮಾಡಬೇಕು. ಯಾವುದೇ ಗೊಂದಲಕ್ಕೆ ಆಸ್ಪದ ನೀಡಬಾರದು.
-ಸುಧಾಕರ್ ಆರೋಗ್ಯ ಸಚಿವ