ಚೊಂಬು ಹಿಡಿದು ತಿರುಗಾಡೋದು ಕಾಂಗ್ರೆಸ್ಸಿಗರ ಅಭ್ಯಾಸ

New Joshi 12New
Published on

ಹುಬ್ಬಳ್ಳಿ : ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆರೂ ಜನರ ಕೈಗೆ ಚೊಂಬು ಕೊಡುವುದನ್ನು ಕಾಂಗ್ರೆಸ್ ನಿಲ್ಲಿಸಲಿಲ್ಲ. ಇದರ ಪರಿಣಾಮ ಜನರೂ ಕಾಂಗ್ರೆಸ್ಸಿಗರ ಕೈಗೆ ಚೊಂಬು ಕೊಡುತ್ತ ಬಂದರು ಎಂದು ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರಿಗೆ ಚೊಂಬು ಹಿಡಿದು ತಿರುಗಾಡೋದು ಅಭ್ಯಾಸವಾಗಿದೆ ಎಂದು ಟೀಕಿಸಿದರು. ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ದೇಶದಲ್ಲಿ 14 ಕೋಟಿಗೂ ಅಧಿಕ ಶೌಚಗೃಹ ನಿರ್ವಿುಸಿ, ಜನರು ಕೈಯಲ್ಲಿ ಚೊಂಬು ಹಿಡಿಯುವುದನ್ನು ತಪ್ಪಿಸಿದ್ದಾರೆ ಎಂದು ಜೋಶಿ ಹೇಳಿದರು.

ಯುಪಿಎ ಸರ್ಕಾರದ ಅವಧಿಯಲ್ಲಿ 12 ಲಕ್ಷ ಕೋಟಿ ರೂ. ಭ್ರಷ್ಟಾಚಾರ ನಡೆಸಿ, ದೇಶದ ಪ್ರತಿಯೊಬ್ಬರ ಕೈಗೂ ಕಾಂಗ್ರೆಸ್​ನವರು ಚೊಂಬು ಕೊಟ್ಟಿದ್ದಾರೆ ಎಂದರು. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದಲ್ಲದೆ, ಅವರ ವಿರುದ್ಧ ಗೆದ್ದವರಿಗೆ ಪದ್ಮವಿಭೂಷಣ ಪ್ರಶಸ್ತಿ ಕೊಟ್ಟು ಸತ್ಕರಿಸುವ ಮೂಲಕ ದಲಿತರ ಕೈಗೆ ಚೊಂಬು ಕೊಟ್ಟವರು ಕಾಂಗ್ರೆಸ್ಸಿಗರು ಎಂದು ಪ್ರಲ್ಹಾದ ಜೋಶಿ ಕಾಂಗ್ರೆಸ್ ವಿರುದ್ಧ ಹರಿ ಹಾಯ್ದರು.

ಇದೆಲ್ಲದರ ಪರಿಣಾಮ ಜನರೂ ಕಾಂಗ್ರೆಸ್ಸಿನವರ ಕೈಗೆ ಚೊಂಬು ಕೊಟ್ಟು ಕಳಿಸಿತ್ತಿದ್ದಾರೆ. ದೇಶದ 20-25 ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಈಗ ಎರಡೇ ರಾಜ್ಯಗಳಲ್ಲಿ ಅಧಿಕಾರದಲ್ಲಿದೆ ಎಂದು ಕುಟುಕಿದರು.

ಛತ್ತಿಸಗಢ, ರಾಜಸ್ಥಾನ, ಮಧ್ಯಪ್ರದೇಶ ಹೀಗೆ ಎಲ್ಲೆಡೆಯೂ ಹೀನಾಯವಾಗಿ ಸೋಲಿಸಿ ವಿರೋಧ ಪಕ್ಷದ ಸ್ಥಾನದಲ್ಲೂ ಕುಳಿತುಕೊಳ್ಳದಂತೆ ಜನ ನಿಮ್ಮ ಕೈಗೆ ಚೊಂಬು ಕೊಟ್ಟಿರುವುದನ್ನು ನೆನಪಿಟ್ಟುಕೊಳ್ಳಿ ಎಂದು ಪ್ರಲ್ಹಾದ ಜೋಶಿ ಕಾಂಗ್ರೆಸ್ ಮುಖಂಡರಿಗೆ ಹೇಳಿದರು.

=============

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net