

ಮಹಾಲಿಂಗಪುರ: ತುರ್ತು ಪರಿಸ್ಥಿತಿಗಳಲ್ಲಿ ರೋಗಿಗಳ ಸೇವೆಗೆ ವೈದ್ಯ ಸಿಬ್ಬಂದಿಗಳು ತಕ್ಷಣ ದೊರಕಬೇಕು ಎಂಬ ಉದ್ದೇಶದಿಂದ ಆರೋಗ್ಯ ಕೇಂದ್ರದ ಸಮೀಪದಲ್ಲಿಯೇ ಗುಣಮಟ್ಟದ ವಸತಿಗೃಹಗಳ ನಿರ್ಮಾಣ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ ಗುಂಡುರಾವ್ ಹೇಳಿದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂಜಿನೀಯರಿಂಗ್ ಘಟಕ ಬೆಂಗಳೂರು ಸಹಯೋಗದಲ್ಲಿ ರನ್ನಬೆಳಗಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ನಿರ್ಮಿಸಿರುವ ಸಿಬ್ಬಂದಿ ವಸತಿಗೃಹಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ಸಿಬ್ಬಂದಿ ಬದ್ಧತೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿ, ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿದರೇ ಅವರಿಗೆ ಆಸ್ಪತ್ರೆ ಬಗ್ಗೆ ವಿಶ್ವಾಸ ಮೂಡಲು ಸಾಧ್ಯವಿದೆ. ಸಾರ್ವಜನಿಕರ ಆರೋಗ್ಯ ಕಾಪಾಡುವುದು ಸರ್ಕಾರದ ಜವಬ್ದಾರಿ. ಆದ್ದರಿಂದ ಪ್ರತಿ ಮನೆಗಳಿಗೂ ತೆರಳಿ ಜನರ ಆರೋಗ್ಯ ತಪಾಸಣೆ ಮಾಡಬೇಕು ಎಂದರು.
ಎಎನ್‌ಎಂ ಮತ್ತು ಆಶಾ ಕಾರ್ಯಕರ್ತೆಯರು ಸಾರ್ವಜನಿಕರಲ್ಲಿ ಆರೋಗ್ಯದ ಕುರಿತು ತಿಳಿವಳಿಕೆ ಮೂಡಿಸಬೇಕು. ತಾಯಿಯ ಆರೋಗ್ಯ ಸರಿ ಇದ್ದರೆ ಶಿಶುವಿನ ಆರೋಗ್ಯ ಸರಿ ಇರುತ್ತದೆ. ಈ ಕುರಿತು ಹೆಚ್ಚಿನ ಗಮನವಹಿಸಿ, ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದರು. ಮುಧೋಳದಲ್ಲಿ 100 ಹಾಸಿಗೆಯುಳ್ಳ ಎಂಸಿಎಚ್(ತಾಯಿ,ಮಗುವಿನ ಆರೋಗ್ಯ) ಆಸ್ಪತ್ರೆ ಪ್ರಾರಂಭಿಸಲಾಗುವದು. ಎಪ್ರಿಲ್ ತಿಂಗಳಿಂದ ಆಶಾ ಕಾರ್ಯಕರ್ತೆಯರಿಗೆ 10 ಸಾವಿರ ರೂ. ನೀಡಲಾಗುವದು ಎಂದರು.
ಬೆಳಗಲಿ ಪಪಂ ಅಧ್ಯಕ್ಷೆ ರೂಪಾ ಹೊಸಟ್ಟಿ, ಉಪಾಧ್ಯಕ್ಷೆ ಸಹನಾ ಸಾಂಗಲಿಕರ, ಮಾಜಿ ಶಾಸಕ ಆನಂದ ನ್ಯಾಮಗೌಡ, ಮುಖಂಡ ಹನುಮಂತ ತಿಮ್ಮಾಪೂರ, ಭೂದಾನಿ ಗುರುಪಾದ ಹೊಸಪೇಟಿ, ಪಪಂ ಸದಸ್ಯರಾದ ಪ್ರವೀಣ ಪಾಟೀಲ, ಮುಬಾರಕ ಅತ್ತಾರ, ನೀಲಕಂಠ ಸೈದಾಪೂರ, ಮುತ್ತು ನಾಯಕ, ಮುತ್ತಪ್ಪ ಸನ್ನಟ್ಟಿ, ಸದಾಶಿವ ಸಂಕ್ರಟ್ಟಿ ಮತ್ತಿತರರಿದ್ದರು.