

ಬೆಂಗಳೂರು ಗ್ರಾಮಾಂತರ: ಅಂಗವಿಕಲರ ಸಬಲೀಕರಣಕ್ಕಾಗಿ ಜಾರಿಗೊಳಿಸಲಾದ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ತಲುಪಿಸುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ತಿಳಿಸಿದರು.
ಜಿಲ್ಲಾಡಳಿತ ಭವನದಲ್ಲಿರುವ ಜಿಪಂ ಸಭಾಂಗಣದಲ್ಲಿ ಬುಧವಾರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ವಿಕಲಚೇತನರ ಸಬಲೀಕರಣ ಇಲಾಖೆ, ಕೃತಕ ಅಂಗಾಂಗ ತಯಾರಿಕಾ ಕಾರ್ಪೋರೇಷನ್ ಆ್ ಇಂಡಿಯಾ (ಆಲಿಂಕೋ), ಜಿಲ್ಲಾಡಳಿತ, ಜಿಪಂ, ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಅಂಗವಿಕಲರಿಗೆ ಉಚಿತ ಸಾಧನ ಸಲಕರಣೆಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಗವಿಕಲರು ಹಿರಿಯ ನಾಗರಿಕರು ಹಾಗೂ ವಿಧವೆಯರಿಗಾಗಿ ವಾರ್ಷಿಕವಾಗಿ 7500 ಕೋಟಿ ರೂ. ಪಿಂಚಣಿ ನೀಡುತ್ತಿದ್ದು, ಅವರು ಗೌರವದಿಂದ ಬದುಕಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಪಿಂಚಣಿ ಯೋಜನೆಯನ್ನು ಮಧ್ಯವರ್ತಿಗಳು ದುರುಪಯೋಗಪಡಿಸಿಕೊಂಡಿದ್ದಾರೆ. ಇದರಿಂದಾಗಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ತಲುಪುತ್ತಿಲ್ಲವಾದ ಕಾರಣ ಇಂತಹ ಘಟನೆಗಳು ಮರುಕಳಿಸದಂತೆ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುವ ಯೋಜನೆ ಶೀಘ್ರವೇ ಜಾರಿಗೆ ಬರಲಿದೆ ಎಂದರು.
ರಾಜ್ಯದಲ್ಲಿ 8,59,761 ಅಂಗವಿಕಲ ಪಿಂಚಣಿದಾರರಿದ್ದು, ಶೇ.75 ಅಂಗವೈಕಲ್ಯ ಇರುವ 3,79,116 ಮಂದಿಗೆ ಪ್ರತಿ ತಿಂಗಳು 600 ರೂ.ಪಿಂಚಣಿ ಮತ್ತು ಶೇ.75ಕ್ಕಿಂತ ಹೆಚ್ಚು ಅಂಗವೈಕಲ್ಯ ಹೊಂದಿರುವ 4,86,645 ಲಾನುಭವಿಗಳಿಗೆ ಪ್ರತಿ ತಿಂಗಳು 1400 ರೂ.ಪಿಂಚಣಿ ಕೊಡಲಾಗುತ್ತಿದೆ ಎಂದು ತಿಳಿಸಿದರು.
ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಜನಪ್ರತಿನಿಧಿಗಳು, ಅಧಿಕಾರಿಗಳು ಅಂಗವಿಕಲರಿಗೆ ನೆರವಾಗುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.
ಕೇಂದ್ರ ಸರ್ಕಾರ ಹಾಗೂ ಅಲಿಂಕೋ ಸಂಸ್ಥೆ ಸಹಯೋಗದೊಂದಿಗೆ 48.32ಲಕ್ಷ ರೂ.ಮೌಲ್ಯದ ಗಾಕಿಕುರ್ಚಿ, ದ್ವಿಚಕ್ರ ವಾಹನ ಸೇರಿ ವಿವಿಧ ಸಾಧನ ಸಲಕರಣೆಗಳು, ಪರಿಕರಗಳನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿದ್ದು ಸ್ವಯಂ ಉದ್ಯೋಗ ರೂಪಿಸಿಕೊಳ್ಳಲು ಸಾಲಸೌಲಭ್ಯ ನೀಡುತ್ತಿದ್ದು, ಯೋಜನೆಗಳ ಸೌಲಭ್ಯ ಪಡೆಯುವಂತೆ ತಿಳಿಸಿದರು.
ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಖಾಸಗಿ ಸಂಸ್ಥೆ ಮತ್ತು ಕೈಗಾರಿಕಾ ವಲಯಗಳಲ್ಲಿ ವಿಕಲಚೇತನರಿಗೆ ರಾಜ್ಯ ಸರ್ಕಾರ ಮೀಸಲಾತಿ ಕಲ್ಪಿಸುವ ಮೂಲಕ ಗೌರವಯುತ ಜೀವನ ಕಟ್ಟಿಕೊಳ್ಳಲು ನೆರವಾಗಬೇಕಿದೆ ಎಂದರು.
ಅಂಗವಿಕಲರಿಗೆ ದ್ವಿಚಕ್ರವಾಹನ, ಗಾಲಿ ಕುರ್ಚಿ, ಶ್ರವಣ ಸಾಧನ ಯಂತ್ರ, ಕೃತಕ ಕೈ, ಕಾಲುಗಳು, ಊರುಗೋಲುಗಳನ್ನು ವಿತರಿಸಲಾಯಿತು.
ಜಿಪಂ ಅಧ್ಯಕ್ಷ ವಿ.ಪ್ರಸಾದ್, ಶಾಸಕ ಟಿ.ವೆಂಕಟರಮಣಯ್ಯ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ಮಂಜುನಾಥ್, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಪಂ ಸಿಇಒ ಎಂ.ಆರ್.ರವಿಕುಮಾರ್, ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್.ಕೆ.ನಾಯಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಪುಷ್ಪಲತಾ.ಜಿ.ರಾಯರ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ ಇದ್ದರು.