ಧರ್ಮ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ

28.PYP 002
Published on

ಪಿರಿಯಾಪಟ್ಟಣ: ನಮ್ಮ ಸನಾತನ ಧರ್ಮ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ಬೈಲುಕುಪ್ಪೆಯ ಆಧ್ಯಾತ್ಮಿಕ ಯೋಗಗುರು ರಾಜೇಂದ್ರ ತಿಳಿಸಿದರು.

ವಿಶ್ವ ಹಿಂದೂ ಪರಿಷತ್ ವತಿಯಿಂದ ಪಟ್ಟಣದ ಡಿ.ದೇವರಾಜ ಅರಸು ಭವನದಲ್ಲಿ ಇತ್ತೀಚೆಗೆ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಲ್ಲಿ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಭಾವನೆ ಬೆಳವಣಿಗೆಯಲ್ಲಿ ತಾಯಂದಿರ ಪಾತ್ರ ಮಹತ್ವದ್ದಾಗಿದೆ. ಇಂದಿನ ಯಾಂತ್ರಿಕ ಯುಗದಲ್ಲಿ ಮಕ್ಕಳು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ. ಗುರು ಹಿರಿಯರನ್ನು ಗೌರವಿಸಿ ನಮ್ಮ ಧರ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸವಾಗಬೇಕು ಎಂದರು.

ವಿಶ್ವ ಹಿಂದೂ ಪರಿಷತ್ ವಿಭಾಗಿಯ ಕಾರ್ಯದರ್ಶಿ ವೆಂಕಟರಾಮ್ ಮಾತನಾಡಿ, ಧರ್ಮ ಸಂಸ್ಥಾಪನೆಯಲ್ಲಿ ಶ್ರೀಕೃಷ್ಣನ ಪಾತ್ರ ಪ್ರಮುಖವಾಗಿದೆ. ಸಮಾಜದಲ್ಲಿ ತಾಂಡವವಾಡುತ್ತಿದ್ದ ಅಧರ್ಮ ಅಳಿಸಿ ಲೋಕಕಲ್ಯಾಣಕ್ಕಾಗಿ ಹಲವು ಅವತಾರ ತಾಳಿದ ಮಹಾನ್ ಪುರುಷ ಶ್ರೀಕೃಷ್ಣ ಪರಮಾತ್ಮ ಆಗಿದ್ದಾನೆ ಎಂದರು.

ಪುರಸಭೆ ಸದಸ್ಯೆ ಮಂಜುಳಾ ರಾಜ್ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಯಿಂದ ನಮ್ಮ ಸನಾತನ ಧರ್ಮ ಮತ್ತು ಸಂಸ್ಕೃತಿ ಬಗ್ಗೆ ತಿಳಿಯಬಹುದಾಗಿದೆ. ಶ್ರೀ ಕೃಷ್ಣ ಛದ್ಮವೇಷ ಸ್ಪರ್ಧೆ ನೋಡಿದ ಬಳಿಕ ನಮ್ಮ ಬಾಲ್ಯದ ನೆನಪುಗಳು ಮರುಕಳಿಸಿದವು ಎಂದರು.

ಕಾರ್ಯಕ್ರಮದಲ್ಲಿ ಮಕ್ಕಳಿಗೆ ರಾಧಾಕೃಷ್ಣ ಛದ್ಮವೇಶ ಸ್ಪರ್ಧೆ ಏರ್ಪಡಿಸಿ ವಿಜೇತ ಮಕ್ಕಳಿಗೆ ಬಹುಮಾನ ಮತ್ತು ಭಾಗವಹಿಸಿದ್ದ ಮಕ್ಕಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.

ಪುರಸಭಾ ಸದಸ್ಯ ಎಚ್.ಕೆ.ಮಂಜುನಾಥ್, ಜನಜಾಗೃತಿ ವೇದಿಕೆಯ ಷಣ್ಮುಖರಾವ್, ವಿಶ್ವ ಹಿಂದು ಪರಿಷತ್ ನ ಮೈಸೂರು ಜಿಲ್ಲಾ ಗ್ರಾಮಾಂತರ ಕಾರ್ಯದರ್ಶಿ ಮಹದೇವಪ್ಪ, ವಿಭಾಗದ ಮಾತೃಶಕ್ತಿ ಪ್ರಮುಖರಾದ ಭಾರತಿ, ಯಜಮಾನ್ ಸ್ಕೂಲ್ ಟ್ರಸ್ಟಿ ನಾಗಮಣಿ, ಮುಖಂಡರಾದ ಶುಭಾಗೌಡ, ಅನಿತಾ, ತುಳಸಿ, ಚಿತ್ರಾ, ಪ್ರಸನ್ನ, ಭಾಗ್ಯಾ, ಯಮುನಾ ಸೇರಿದಂತೆ ದುರ್ಗವಾಹಿನಿ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net