ಸೇಡಿನ ರಾಜಕಾರಣ ಮಾಡುವವರು ಬಿಜೆಪಿಯವರು, ಕಾಂಗ್ರೆಸ್ ಪಕ್ಷವಲ್ಲ: ಸಿಎಂ ಸಿದ್ದರಾಮಯ್ಯ

Siddaramayya 2
Published on

ಮೈಸೂರು: ನನ್ನ, ಡಿ.ಕೆ.ಶಿವಕುಮಾರ್ ಹಾಗೂ ರಾಹುಲ್ ಗಾಂಧಿ ವಿರುದ್ಧ ಕೇಸ್ ಹಾಕಿದ್ರಲ್ಲಾ ಅದಕ್ಕೆ ಏನೆಂದು ಕರೆಯುವುದು? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.


ಎಚ್.ಡಿ.ದೇವೇಗೌಡರ ಕುಟುಂಬದ ನಂತರ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬವನ್ನು ಗುರಿ ಮಾಡಲಾಗಿದೆ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ನಗರದಲ್ಲಿ ಶನಿವಾರ ತಿರುಗೇಟು ನೀಡಿದರು


ರಾಹುಲ್ ಗಾಂಧಿ ಅವರ ಸದಸ್ಯತ್ವವನ್ನೇ ರದ್ದುಗೊಳಿಸಿದ್ದರಲ್ಲಾ ಅದಕ್ಕೆ ಏನೆಂದು ಕರೆಯುವುದು? ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್ ಅವರನ್ನು ಜೈಲಿಗೆ ಕಳಿಸಿದ್ದಾರಲ್ಲ ಅದಕ್ಕೆ ಏನೆಂದು ಕರೆಯುವುದು? ದ್ವೇಷದ ರಾಜಕಾರಣ ಎಂದು ಕರೆಯಬೇಕೋ ಅಥವಾ ಪ್ರೀತಿಯ ರಾಜಕಾರಣ ಎನ್ನಬೇಕೇ? ಎಂದು ಪ್ರಶ್ನಿಸಿದರು.

ಸೇಡಿನ ರಾಜಕಾರಣ ಮಾಡುವವರು ಬಿಜೆಪಿಯವರು. ಅದೇ ಆ ಪಕ್ಷದ ಕೆಲಸ. ನಾವು ಯಾವತ್ತು ಕೂಡ ಸೇಡಿನ ರಾಜಕಾರಣ ಮಾಡುವುದಿಲ್ಲ. ನಾನು ನಿನ್ನೆ-ಮೊನ್ನೆ ರಾಜಕೀಯಕ್ಕೆ ಬಂದಿಲ್ಲ. ಈ ವರೆಗೂ ಯಾರ ವಿರುದ್ಧವೂ ಸೇಡಿನ ರಾಜಕಾರಣ ಮಾಡಿಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಸಚಿವ ಸಂಪುಟದಲ್ಲಿ ದಕ್ಷಿಣ ಭಾರತದದವರಿಗೆ ಆದ್ಯತೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ದಕ್ಷಿಣ ಭಾರತದಲ್ಲಿ ಜನರು ಬಿಜೆಪಿಯನ್ನು ಬೆಂಬಲಿಸುವುದಿಲ್ಲ. ಬಿಜೆಪಿ ಆರ್‌ಎಸ್‌ಎಸ್‌ನ ರಾಜಕೀಯ ಮುಖವಾಡ. ಹೀಗಾಗಿ, ಜನರು ಅವರನ್ನು ಬೆಂಬಲಿಸುವುದಿಲ್ಲ ಎಂದರು.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಉತ್ತರ ಭಾರತದ ವಿವಿಧೆಡೆ ಕೂಡ ಹಿನ್ನಡೆಯಾಗಿದೆ. ಅಹಂಕಾರ ಇರುವುದರಿಂದ ಜನರು ಸರಿಯಾದ ಪಾಠ ಕಲಿಸಿದ್ದಾರೆ ಎಂದು ಆರ್‌ಎಸ್‌ಎಸ್‌ನವರೇ ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದರು.


ದ್ವೇಷದ ರಾಜಕಾರಣ ಮಾಡುವುದೇ ಬಿಜೆಪಿಯವರ ಕೆಲಸ. ಹೆದರಿಸುವುದು, ಬೆದರಿಸುವುದು ಆ ಪಕ್ಷದ ಸಂಸ್ಕೃತಿ. ಇದಕ್ಕಾಗಿ ಜಾರಿ ನಿರ್ದೇಶನಾಲಯ (ಇಡಿ), ಆದಾಯ ತೆರಿಗೆ ಇಲಾಖೆ ಹಾಗೂ ಸಿಬಿಐ ದುರ್ಬಳಕೆ ಮಾಡಿಕೊಂಡಿದೆ. ಅದಕ್ಕಾಗಿಯೇ ಜನರು ಈ ಬಾರಿ ಬಿಜೆಪಿಯವರಿಗೆ ಬಹುಮತ ನೀಡಿಲ್ಲ ಎಂದರು.


ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಆದಾಯ ಮಿತಿಯನ್ನು ಹೆಚ್ಚಿಸಿರುವುದರಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜಿನ ಶುಲ್ಕವನ್ನು ಶೇ.10ರಷ್ಟು ಹೆಚ್ಚಿಸಿರುವುದು ನನಗೆ ಗೊತ್ತಿಲ್ಲ. ಆ ಬಗ್ಗೆ ಪರಿಶೀಲಿಸುತ್ತೇನೆ ಎಂದು ತಿಳಿಸಿದರು.


ಶೀಘ್ರದಲ್ಲೇ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ನಡೆಸುತ್ತೇವೆ ಎಂದು ಪ್ರಶ್ನೆವೊಂದಕ್ಕೆ ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net