

ಬೇಲೂರು: ಭಾರತದ ಭವ್ಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ರಾಮಾಯಣದಂತಹ ಮೇರು ಕೃತಿಯನ್ನು ರಚಿಸಿ ಕೊಟ್ಟ ಮಹರ್ಷಿ ವಾಲ್ಮೀಕಿ ವಿಶ್ವಮಾನ್ಯ ದಾರ್ಶನಿಕರಾಗಿದ್ದಾರೆ ಎಂದು ತಹಸೀಲ್ದಾರ್ ಎಂ.ಮಮತಾ ಹೇಳಿದರು.
ತಾಲೂಕು ಆಡಳಿತದಿಂದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಮಹರ್ಷಿ ವಾಲ್ಮಿಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಮಾಯಣದ ಮೂಲಕ ರಾಜ ಧರ್ಮ, ನೀತಿ ಶಾಸ್ತ್ರವನ್ನು ಬೋಧಿಸಿದ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಸ್ಮರಣೆಯನ್ನು ಪ್ರತಿವರ್ಷ ಮಾಡುತ್ತೇವೆ. ಆದರೆ ಅವರು ಹಾಕಿಕೊಟ್ಟ ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳದೆ ಮಹನೀಯರು ಹಾಕಿಕೊಟ್ಟ ತತ್ವ ಸಿದ್ಧಾಂತವನ್ನು ಗಾಳಿಗೆ ತೂರಿ ದುಶ್ಚಟಗಳಿಗೆ ದಾಸರಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಮಹನೀಯರ ಆದರ್ಶ ಮತ್ತು ಸಂಸ್ಕೃತಿಯನ್ನು ನಮ್ಮ ಮಕ್ಕಳಿಗೆ ತಿಳಿಸುವ ಕೆಲಸವಾಗಬೇಕಿದೆ. ಜತೆಗೆ ಮನುಷ್ಯನ ದುರಾಸೆಯಿಂದ ಜೀವನದ ಮೌಲ್ಯಗಳನ್ನು ಮರೆತು ಗುರು-ಹಿರಿಯರನ್ನು ಗೌರವಿಸುತ್ತಿಲ್ಲ. ಯಾರು ಜೀವನದಲ್ಲಿ ಮೌಲ್ಯ ಸಿದ್ಧಾಂತಗಳನ್ನು ಅರಿತು ಕೆಲಸ ಮಾಡುತ್ತಾರೋ ಅಂತಹವರು ಸಮಾಜದಲ್ಲಿ ಎತ್ತರಕ್ಕೆ ಬೆಳೆಯುತ್ತಾರೆ ಎಂದರು.
ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಮಾತನಾಡಿ, ಜಗತ್ತಿನ ಶ್ರೇಷ್ಠ ಗ್ರಂಥಗಳಲ್ಲಿ ಮಹರ್ಷಿ ವಾಲ್ಮೀಕಿ ಅವರು ರಚಿಸಿದ ರಾಮಾಯಣವು ವಿಶ್ವಕ್ಕೆ ರಾಮರಾಜ್ಯದ ಪರಿಚಯ ಮಾಡಿ ಕೊಟ್ಟಿದ್ದಾರೆ. ರಾಜನಾದವನು ಪ್ರಜೆಗಳನ್ನು ಹೇಗೆ ರಕ್ಷಿಸಬೇಕು, ಯಾವ ರೀತಿ ಆಡಳಿತ ನಡೆಸಬೇಕು ಎಂಬುದರ ಕುರಿತು ಪ್ರಜಾಪ್ರಭುತ್ವದ ಮಹತ್ವವನ್ನು ತಮ್ಮ ಕಾವ್ಯದ ಮೂಲಕ ತೋರಿಸಿಕೊಟ್ಟಿದ್ದಾರೆ. ಇಂತಹ ಮಹಾನ್ ಪುರುಷರು ಬಂದು ಹೋದ ಪುಣ್ಯ ಭೂಮಿಯಲ್ಲಿ ಜನಿಸಿದ ನಾವು ಪುಣ್ಯವಂತರು. ಇಂತಹ ಮಹನೀಯರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ತಾಪಂ ಇಒ ವಸಂತಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ, ಪುರಸಭೆ ಮುಖ್ಯಾಧಿಕಾರಿ ಸುಜಯ್‌ಕುಮಾರ್, ಬಿಆರ್‌ಸಿ ಶಿವಮರಿಯಪ್ಪ, ವಾಲ್ಮಿಕಿ ಸಂಘದ ತಾಲೂಕು ಅಧ್ಯಕ್ಷ ಕುಮಾರ ನಾಯಕ್, ಮುಖಂಡರಾದ ರಂಗನಾಥ್, ರಾಮ, ಲಕ್ಷ್ಮಣ, ಕುಮಾರ ನಾಯಕ್, ಮಜ ನಾಯಕ, ನಾಗೇಂದ್ರ, ಮಧು ಸೇರಿದಂತೆ ಇತರರಿದ್ದರು.