ಆಯುರ್ವೇದ ಆಚರಣೆ ಕೈಬಿಡುತ್ತಿರುವುದು ಬೇಸರದ ಸಂಗತಿ

8
Published on

ಮೈಸೂರು: ದೇಶದ ದೊಡ್ಡ ಸಂಪತ್ತು ಎಂದರೆ ಅದು ನಮ್ಮ ಸಂಸ್ಕೃತಿ, ಸಂಪ್ರದಾಯ, ಆಯುರ್ವೇದ. ಇವುಗಳಿಗೆ ಬೆಲೆ ಕಟ್ಟಲು ಆಗುವುದಿಲ್ಲ ಎಂದು ಬೇಬಿ ಮಠದ ಡಾ.ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ತಿಳಿಸಿದರು.
ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ, ದಕ್ಷಿಣ ಕನ್ನಡ ಮತ್ತು ಕರಾವಳಿ ಸಂಘಗಳ ಒಕ್ಕೂಟ, ಜಿಲ್ಲಾ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಕರ್ತರ ಭವನದಲ್ಲಿ ಪತ್ರಕರ್ತರು ಹಾಗೂ ಅವರ ಕುಟುಂಬದವರಿಗಾಗಿ ಆಯೋಜಿಸಿದ್ದ ಉಚಿತ ಆಯುರ್ವೇದ ತಪಾಸಣಾ ಶಿಬಿರ ಉದ್ಘಾಟಿಸಿದ ಮಾತನಾಡಿದರು.


ಕೋವಿಡ್ ಸಾಂಕ್ರಾಮಿಕ ಕಾಣಿಸಿಕೊಂಡ ಮೇಲೆ ಇಡೀ ಜಗತ್ತಿಗೆ ಆಯುರ್ವೇದ ಮಹತ್ವ ಹೆಚ್ಚಾಗಿ ಅರಿವಾಯಿತು. ಆದರೆ, ಹಣ ಮಾಡಲು ಸಾಧ್ಯವಿಲ್ಲ ಎಂಬ ಕಾರಣದಿಂದಾಗಿಯೇ ಆಯುರ್ವೇದ ಕಲಿತ ಬಹಳಷ್ಟು ಮಂದಿ ಅದರ ಆಚರಣೆ ಕೈಬಿಡುತ್ತಿರುವುದು ಬೇಸರದ ಸಂಗತಿ ಎಂದರು.
ಇತರೆ ರಾಷ್ಟ್ರಗಳ ಶ್ರೀಮಂತಿಕೆಯನ್ನು ಹಣದ ಮೇಲೆ ಅಳೆದರೆ, ಭಾರತದ ಸಂದರ್ಭಕ್ಕೆ ಬಂದಾಗ ಸಂಸ್ಕೃತಿ, ಸಂಸ್ಕಾರ, ಯೋಗ, ಆಯುರ್ವೇದಗಳ ಮೇಲೆ ಇಲ್ಲಿನ ಶ್ರೀಮಂತಿಕೆ ಆಳೆಯುವುದು ಸಂತಸದ ಸಂಗತಿಯಾಗಿದೆ. ಈ ನಡುವೆ ಪತ್ರಕರ್ತರಿಗೂ ಒಂದು ಜೀವನವಿದೆ. ಸದಾ ಕೆಲಸದ ಒತ್ತಡದಲ್ಲಿಯೇ ಕಾರ್ಯ ನಿರ್ವಹಿಸುವ ಇವರಿಗೆ ಆರೋಗ್ಯದ ಕಡೆಗೆ ಗಮನ, ಸಮಯ ನೀಡಲು ಸಾಧ್ಯವಾಗದು. ಹೀಗಾಗಿ ಈ ಶಿಬಿರ ಆಯೋಜಿಸಿರುವುದು ಸ್ವಾಗತಾರ್ಹವಾಗಿದೆ ಎಂದರು.
ಇಂದು ನಾವು ತಿನ್ನುವುದೆಲ್ಲ ವಿಷವಾಗಿದೆ. ಹೀಗಾಗಿ ಕೇಂದ್ರ, ರಾಜ್ಯ ಸರ್ಕಾರಗಳು ರಾಸಾಯನಿಕ ಗೊಬ್ಬರದ ಬದಲು ಸಾವಯವ ಗೊಬ್ಬರ ಬಳಲು ರೈತರಿಗೆ ಉತ್ತೇಜನ ನೀಡಬೇಕು. ಆಹಾರಗಳಿಗೆ ಐಎಸ್‌ಐ ಮುದ್ರೆ ನೀಡುವ ಮೊದಲು ಪರಿಶೀಲಿಸಬೇಕು. ಜನರ ರಕ್ಷಣೆಗೆ ಸರ್ಕಾರಗಳು ಮುಂದಾಗಬೇಕು ಎಂದು ಒತ್ತಾಯಿಸಿದರು.

ಮೇಯರ್ ಶಿವಕುಮಾರ್ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ, ಡಾ.ಲಕ್ಷ್ಮೀನಾರಾಯಣ ಶೆಣೈ, ರೋಡ್ರಿಗಸ್, ನಾರಾಯಣ ಹೆಗ್ಡೆ, ಇನ್ನಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net