

ಮೈಸೂರು: ಸೋನಿಯಾ ಗಾಂಧಿ ಅಧಿಕಾರದಲ್ಲಿದ್ದ ಸಂದರ್ಭ ದೇಶದಲ್ಲಿ ಕ್ರೈಸ್ತರಿಗೆ ಹೆಚ್ಚಿನ ಆದ್ಯತೆ ನೀಡಿದರು. ಕೆಲವು ರಾಜ್ಯಗಳಲ್ಲಿ ಕ್ರೈಸ್ತರನ್ನು ಮುಖ್ಯಮಂತ್ರಿಯಾಗಿ ಮಾಡಿದರು. ಅಲ್ಲದೆ, ಕೇಂದ್ರದಲ್ಲಿ ಕ್ರೈಸ್ತರಿಗೆ ಪ್ರಮುಖ ಖಾತೆಗಳನ್ನು ನೀಡಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾವರ್ಕರ್ ಪ್ರತಿಷ್ಠಾನ ಮೈಸೂರು ವತಿಯಿಂದ ನಗರದ ಕಲಾಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವೀರ ಸಾವರ್ಕರ್ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ದೇಶದಲ್ಲಿ ಸೇವೆಯ ಹೆಸರಿನಲ್ಲಿ ಮತಾಂತರ ಮಾಡಿದವರಿಗೆ ಭಾರತ ರತ್ನ ನೀಡಲಾಗಿದೆ. ಆದರೆ, ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದರೂ ಅವರಿಗೆ ಭಾರತ ರತ್ನ ನೀಡಿಲ್ಲದೆ ಇರುವುದು ಬೇಸರದ ವಿಚಾರ. ಸಾವರ್ಕರ್ ಅವರನ್ನು ಕಡೆಗಣಿಸಿದ ರೀತಿಯಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ಕಡೆಗಣಿಸಲಾಗಿದೆಯೇ ಎಂಬ ಅನುಮಾನ ಮೂಡುತ್ತದೆ. ಆದರೆ ಮತ್ತೊಂದೆಡೆ ಸ್ವಾಮೀಜಿ ಆದವರಿಗೆ ಯಾವುದೇ ಟೈಟಲ್‌ಗಳ ಅವಶ್ಯಕತೆ ಇಲ್ಲ ಎಂಬ ಅಭಿಪ್ರಾಯವೂ ಸಹ ಮೂಡುತ್ತದೆ ಎಂದು ಹೇಳಿದರು.
ಸ್ವಾತಂತ್ರೃ ಸಂದರ್ಭ ಕ್ರಾಂತಿಯಿಂದ ಜೈಲಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಯಿತು. ಇದು ಸಾಕಷ್ಟು ಜನರಿಗೆ ಸಂಕಷ್ಟವನ್ನು ತಂದೊಡ್ಡಿತು. ಆ ಸಂದರ್ಭ ದೇಶಕ್ಕೆ ಬಂದ ಮಹಾತ್ಮಗಾಂಧಿ ಅವರು ಅಹಿಂಸಾತ್ಮಕ ಹೋರಾಟ ಪರಿಚಯಿಸಿದರು. ಇದು ಕೆಲವು ಕ್ರಾಂತಿಕಾರಿಗಳಿಗೆ ಇಷ್ಟವಾಯಿತು. ಬ್ರಿಟಿಷರಿಗೂ ಅದೇ ಬೇಕಾಕಿತ್ತು. ಆ ಸಂದರ್ಭದಲ್ಲಿ ಮಹಾತ್ಮಗಾಂಧಿ ‘ಈಶ್ವರ ಅಲ್ಲ ತೇರೇ ನಾಮ್’ ಎಂಬ ಸಂದೇಶ ನೀಡಿದರು. ಹಿಂದುಗಳು ಈ ಗೀತೆಯನ್ನು ದೇವಸ್ಥಾನದಲ್ಲೂ ಹಾಡಲು ಪ್ರಾರಂಭಿಸಿದರು. ಆದರೆ, ಒಬ್ಬ ಮುಸ್ಲಿಂ ಸಹ ಈ ಸಂದೇಶವನ್ನು ಒಪ್ಪಲಿಲ್ಲ ಎಂದರು.
ವೇದಿಕೆಯಲ್ಲಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಸಾವರ್ಕರ್ ಪ್ರತಿಷ್ಠಾನ ಅಧ್ಯಕ್ಷೆ ಡಾ.ಯಶಸ್ವಿನಿ, ಆದಿತ್ಯ ಆಸ್ಪತ್ರೆ ಸಂಸ್ಥಾಪಕ ಡಾ.ಚಂದ್ರಶೇಖರ್ ಇದ್ದರು.