

ಕೆ.ಆರ್.ಸಾಗರ : ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಕೆ.ಆರ್.ಸಾಗರ ಆರೋಗ್ಯ ಕ್ಷೇಮ ಕೇಂದ್ರದ ವತಿಯಿಂದ ಶುಕ್ರವಾರ ಕೆ.ಆರ್.ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಶಾ ಮುಕ್ತ ಭಾರತ ಅಭಿಯಾನದಡಿ ಪ್ರತಿಜ್ಞಾವಿಧಿ ಸ್ವೀಕಾರ ಹಾಗೂ ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ್ ಮಾತನಾಡಿ, ಯುವಕರು, ಸಾರ್ವಜನಿಕರು ಮಾದಕ ವಸ್ತು ವ್ಯಸನಕ್ಕೆ ಬಲಿಯಾಗಬಾರದು. ಆಧುನಿಕ ಜೀವನ ಶೈಲಿಯಿಂದಾಗಿ ಮೊಬೈಲ್ ವ್ಯಸನಕ್ಕೆ ಬಲಿಯಾಗುತ್ತಿರುವುದು ವಿಷಾದಕರ. ಮಾದಕ ವಸ್ತುಗಳಾದ ಗಾಂಜಾ, ಅಫೀಮು, ನಾರ್ಕೋಟಿಕ್ ಡ್ರಗ್, ತಂಬಾಕು ಮತ್ತು ನಶೆ ಉಂಟುಮಾಡುವ ವಸ್ತುಗಳಿಂದ ಯುವಕರು ಹಾಗೂ ಸಾರ್ವಜನಿಕರು ದೂರ ಇರಬೇಕು. ಕೆಟ್ಟ ಗೆಳೆಯರ ಸಹವಾಸದಿಂದ ದುಶ್ಚಟಕ್ಕೆ ಒಳಗಾಗಬಾರದು. ದೇಶವನ್ನು ವ್ಯಸನ ಮುಕ್ತ ಅಥವಾ ನಶೆ ಮುಕ್ತ ಭಾರತವನ್ನಾಗಿಸಲು ನಾವೆಲ್ಲ ಪಣತೊಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಶಿಲ್ಪಶ್ರೀ ಮಾತನಾಡಿ, ನಮ್ಮ ದೇಶದ ಸಮೃದ್ಧ ಬೆಳವಣಿಗೆಗೆ, ಸಂಪನ್ಮೂಲ ಬಳಕೆ ಮತ್ತು ಉತ್ಪಾದಕತೆಗೆ ಯುವಕರು ಬಹಳ ಮುಖ್ಯ. ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ಮಾರು ಹೋಗದೆ ತಮ್ಮ ಆರೋಗ್ಯ ಹಾಗೂ ಅಭ್ಯಾಸದ ಕಡೆ ಗಮನಹರಿಸಿ ಉತ್ತಮ ಪ್ರಜೆಯಾಗಿ ಹೊರಹೊಮ್ಮಬೇಕೆಂದು ಸಲಹೆ ನೀಡಿದರು.
ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಸಿ.ಚಂದನಾ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾಲೇಜು ಪ್ರಾಧ್ಯಾಪಕರಾದ ಡಾ.ಮೋಹನ್ ಕುಮಾರ್, ಅಂಬುಜಾಕ್ಷಿ ಡಾ.ಎಸ್.ಸುಮಾ ಬಿ.ಪ್ರಸಾದ್ ಹಾಗೂ ಆಶಾ ಕಾರ್ಯಕರ್ತೆ ರೂಪಾ ಉಪಸ್ಥಿತರಿದ್ದರು.