

ಮೈಸೂರು: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ ಪಠ್ಯಕ್ರಮದಿಂದ ಜಾತ್ಯತೀತತೆ, ಒಕ್ಕೂಟ ವ್ಯವಸ್ಥೆ, ಗ್ರಾಮೀಣ ವಿಕೇಂದ್ರೀಕೃತ ಆಡಳಿತ ಮತ್ತು ಪೌರಜಾಗೃತಿ ಪಠ್ಯಗಳನ್ನು ಕೈಬಿಟ್ಟಿರುವುದು ಖಂಡನೀಯ ನಡವಳಿಕೆ ಎಂದು ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ದೂರಿದ್ದಾರೆ.
ಕೇಂದ್ರ ಸರ್ಕಾರದ ಈ ನಡೆ ವಿದ್ಯಾರ್ಥಿಗಳಲ್ಲಿ ಕೋಮುವಾದ ಬಿತ್ತಲು ಮತ್ತು ಜಾತ್ಯತೀತತೆಯ ಉತ್ತಮಾಂಶಗಳನ್ನು ಮರೆಮಾಚಲು ನಡೆಸಿರುವ ಹುನ್ನಾರವಾಗಿದೆ. ಪಠ್ಯಗಳ ಮೂಲಕ ಉನ್ನತ ವಿಚಾರಗಳನ್ನು ಅರಿತು ಮುಂದೆ ಜೀವನದಲ್ಲಿ ಆದರ್ಶ ಮತ್ತು ಮಾದರಿ ವ್ಯಕ್ತಿಯಾಗಿ ರೂಪುಗೊಳ್ಳಬಹುದಾಗಿದ್ದ ವಿದ್ಯಾರ್ಥಿ ಸಮುದಾಯವನ್ನು, ಇಂತಹ ಕ್ಷುಲ್ಲಕ ಬದಲಾವಣೆಗಳ ಮೂಲಕ ನಿಯಂತ್ರಿಸಲು ಬಿಜೆಪಿ ಮುಂದಾಗಿದೆ ಎಂದು ಹೇಳಿಕೆಯಲ್ಲಿ ಟೀಕಿಸಿದ್ದಾರೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯನ್ನು ತನ್ನ ಕೈ ಗೊಂಬೆ ಮಾಡಿಕೊಂಡಿರುವ ಬಿಜೆಪಿ ಸರ್ಕಾರ, ಜಾತ್ಯತೀತ ಮೌಲ್ಯಗಳು ಮತ್ತು ಸಮಾನತೆಯ ಆಶಯಗಳನ್ನು ನಾಶಮಾಡುತ್ತಿದೆ. ಕರೊನಾ ಹಿನ್ನೆಲೆಯಲ್ಲಿ ಸಮಯ ಅಭಾವದಿಂದ ಪಠ್ಯ ಕೈಬಿಡಲಾಗಿದೆ ಎಂದು ನೀಡಿರುವ ಸಮರ್ಥನೆ ಶುದ್ಧ ಪೊಳ್ಳು. ಇಂತಹ ಸಂಕಷ್ಟದ ಸಮಯವನ್ನು ತನ್ನ ವಿದ್ವಂಸಕ ಅಜೆಂಡಾ ಬಿತ್ತಲು ಬಿಜೆಪಿ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ಎಂದಿದ್ದಾರೆ.