ರಂಗಭೂಮಿಗೆ ಸಹೃದಯಿಗಳನ್ನು ಸೇರಿಸಿಕೊಳ್ಳುವುದೇ ಅಪರೂಪ

2 - Copy
Published on

ಇತ್ತೀಚಿನ ಕಾಲದಲ್ಲಿ ರಂಗಭೂಮಿಗೆ ಸಹೃದಯಿಗಳನ್ನು ಸೇರಿಸಿಕೊಳ್ಳುವುದೇ ಅಪರೂಪವಾಗಿದೆ ಎಂದು ಹಿರಿಯ ರಂಗ ನಿರ್ದೇಶಕ ಪ್ರೊ.ಎಸ್.ಆರ್.ರಮೇಶ್ ಬೇಸರ ವ್ಯಕ್ತಪಡಿಸಿದರು.

ಕಲಾಮಂದಿರದ ಕಿರು ರಂಗಮಂದಿರದಲ್ಲಿ ಗೌತಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸೇವಾ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶುಕ್ರವಾರ 25 ದಿನಗಳ ರಂಗಭೂಮಿ ಮತ್ತು ಜಾನಪದ ಕಲಾ ಪ್ರಕಾರಗಳ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಭಿನ್ನ ಆಲೋಚನೆಗಳು ಇರುವ ಅನೇಕರನ್ನು ಸೇರಿಸಿಕೊಂಡು ಸಮಾನ ಮನಸ್ಕ ಚಿಂತನೆಗೆ ತರುವುದು ಉತ್ತಮ ಕೆಲಸ. ಇಂತಹ ಒಳ್ಳೆಯ ಕೆಲಸಗಳಿಗೆ ಬೆಂಬಲ ನೀಡಬೇಕಿರುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು.

ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಾಗ ಮಾತ್ರ ನಮಗೆ ಮಾತಿನ ಮಹತ್ವ ಎಂತಹದ್ದು ಎಂದು ಗೊತ್ತಾಗುತ್ತದೆ. ನಮ್ಮ ಆಲೋಚನೆಗಳನ್ನು ಅಭಿವ್ಯಕ್ತಗೊಳಿಸಲು ಸಾಧ್ಯವಾಗದೇ ಇರುವಾಗ ನಾವು ಬದುಕುತ್ತಿರುವ ಸಮಾಜದ ಬಗ್ಗೆ ಅರಿವಾಗುತ್ತದೆ. ನಮ್ಮ ಆಲೋಚನೆಗಳನ್ನು ಮುಕ್ತವಾಗಿ ಹೇಳಿಕೊಳ್ಳುವ ಸ್ವಾತಂತ್ರ್ಯ ಸಮಾಜದಲ್ಲಿ ಇಲ್ಲದೇ ಇರುವಾಗ ಜಾನಪದ ಕಲೆಗಳು ಹೆಚ್ಚು ಮಹತ್ವ ಪಡೆದುಕೊಳ್ಳುತ್ತವೆ ಎಂದು ಹೇಳಿದರು.

ಜಾನಪದ ಕಲೆಗಳು ಮನುಷ್ಯ ಕಂಡುಕೊಂಡಿರುವ ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯ. ಅದು ಸಮಾಜದಲ್ಲಿ ಒಂದು ಹೆಣ್ಣು ಮಗಳು ತಾನು ಅನುಭವಿಸುವ ವ್ಯಥೆ ಮತ್ತು ವೈರುಧ್ಯಗಳಾಗಬಹುದು ಅಥವಾ ಒಬ್ಬ ಹುಡುಗ ಪ್ರೀತಿ ಪಡೆದುಕೊಳ್ಳಲು ಸಾಧ್ಯವಾಗದೆ ಇರುವಂತಹ ಸನ್ನಿವೇಶವಾಗಿರಬಹುದು ಎಂದು ಹೇಳಿದರು.

ಇತಿಹಾಸ ತಿರುಚಿ ಬರೆಯುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಟಿಪ್ಪು ಸುಲ್ತಾನ್ ನಾಟಕದ ಹೆಸರಿನಲ್ಲಿ ನಡೆಯದೇ ಇರುವ ಇತಿಹಾಸವನ್ನು ನಡೆದಿದೆ ಎಂದು ಸುಳ್ಳು ಪ್ರಚಾರದ ಮೂಲಕ ಜನರಲ್ಲಿ ಬಿತ್ತುವ ಕೆಲಸ ರಂಗಾಯಣದಲ್ಲೇ ಈಚೆಗೆ ನಡೆಯಿತು. ಆತನ ಹೆಸರಿನಲ್ಲಿ ಸಾಕಷ್ಟು ಲಾವಣಿ ರಚನೆಗೊಂಡಿವೆ. ಇವು ಯಾವುದೇ ಆಪೇಕ್ಷೆ ಇಲ್ಲದೇ ರಚಿಸುವಂತಹ ಲಾವಣಿಗಳು ಎಂದರು.

ಮಹಾರಾಜ ಕಾಲೇಜಿನ ಜಾನಪದ ವಿಭಾಗದ ಮುಖ್ಯಸ್ಥೆ ಡಾ.ಎಚ್.ಆರ್.ಚೇತನಾ ಮಾತನಾಡಿ, ಮನುಷ್ಯ ಬೆಳವಣಿಗೆಯೊಂದಿಗೆ ಜಾನಪದ ಕಲೆಗಳು ತಮ್ಮದೇ ಆದ ರೂಪ ಪಡೆದುಕೊಂಡಿವೆ. ಇವು ಮನುಷ್ಯನ ದುಃಖ, ದುಮ್ಮಾನ, ಅಭಿವ್ಯಕ್ತಿ, ಆಲೋಚನೆ ಎಲ್ಲವನ್ನೂ ಹಿಡಿದಿಟ್ಟಿವೆ ಎಂದು ಹೇಳಿದರು.

ಜಾನಪದ ಕಲೆಗಳು ಧಾರ್ಮಿಕ ಹಿನ್ನೆಲೆಯಿಂದ ಬೆಳೆದು ಬಂದಿವೆ. ಒಂದು ಕಾಲದಲ್ಲಿ ಯಾವುದೇ ಶಿಕ್ಷಣವಿಲ್ಲದೆ ನಂಬಿಕೆ, ಸಂಪ್ರದಾಯ, ನಡವಳಿಕೆಗಳು, ಆಹಾರ ಪದ್ಧತಿಗಳು ಕೇವಲ ಮಾತು, ಅಭಿನಯ ಮೂಲಕವೇ ಮುಂದುವರಿದುಕೊಂಡು ಬಂದಿವೆ. ಈ ಎಲ್ಲ ಪರಂಪರೆಯನ್ನು ನಮ್ಮ ಜಾನಪದ ಕಲೆಗಳು ಮುಂದಿನ ತಲೆಮಾರುಗಳಿಗೆ ವರ್ಗಾಯಿಸುತ್ತಾ ಬಂದಿದ್ದು, ಅಕ್ಷರ ಜ್ಞಾನ ಬೆಳೆದಂತೆ ಇವುಗಳನ್ನು ದಾಖಲಿಸುವ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ ಎಂದರು.
ಹಿರಿಯ ರಂಗಭೂಮಿ ಕಲಾವಿದ ಮೈಮ್ ರಮೇಶ್ ಹಾಗೂ ಶಿಬಿರಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net