

ಮಡಿಕೇರಿ: ಕ್ರೀಡೆಗಳಿಂದ ಮಾತ್ರ ಎಲ್ಲರ ಮನಸ್ಸುಗಳನ್ನು ಒಂದುಗೂಡಿಸಲು ಸಾಧ್ಯ ಎಂದು ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಪ್ರಧಾನ ಕಾರ್ಯದರ್ಶಿ ಪಿ.ಕೆ.ಶಶಿಕುಮಾರ್ ಅಭಿಪ್ರಾಯಪಟ್ಟರು.
ಕಂಡಕರೆಯ ಗಾಂಧಿ ಯುವಕ ಸಂಘದ ವತಿಯಿಂದ ಚೆಟ್ಟಳ್ಳಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಅಂಡರ್-೨೦ ಕಾಲ್ಚೆಂಡು ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕವಾಗಿ ಬೆಳವಣಿಗೆ ಕಾಣಬಹುದು. ಕಂಪ್ಯೂಟರ್ ಯುಗದಲ್ಲಿ ಮುಳುಗಿ, ಇತ್ತೀಚಿನ ದಿನಗಳಲ್ಲಿ ಯುವಕರು ಕ್ರೀಡೆಗಳಿಂದ ದೂರ ಉಳಿಯುತ್ತಿದ್ದಾರೆ. ಯುವಕರು ಕ್ರೀಡೆಯಲ್ಲಿ ಹೆಚ್ಚಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಜಿಲ್ಲೆಯ ಮುಖ್ಯ ಪಟ್ಟಣಗಳಿಂದ ಬರುವ ಎಲ್ಲರಿಗೂ ಚೆಟ್ಟಳ್ಳಿ ಮಧ್ಯಭಾಗವಾಗಿದೆ. ಹಿಂದಿನ ಕಾಲದಲ್ಲಿ ಚೆಟ್ಟಳ್ಳಿಗೆ ಹತ್ತನೇ ಮೈಲು ಎಂಬ ಹೆಸರು ಕೂಡ ಇತ್ತು. ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯದಲ್ಲಿ ಒಂದು ಆಂಬ್ಯುಲೆನ್ಸ್ ಅತ್ಯವಶ್ಯಕವಾಗಿದ್ದು, ಇದಕ್ಕಾಗಿ ಸರ್ಕಾರ ಮಟ್ಟದಲ್ಲಿ ಪ್ರಯತ್ನಿಸಲಾಗುತ್ತಿದೆ. ಚೆಟ್ಟಳ್ಳಿ ಭಾಗದ ಎಲ್ಲಾ ಸಂಘ-ಸಂಸ್ಥೆಗಳು ಕೈ ಜೋಡಿಸಬೇಕಾಗಿ ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಗಾಂಧಿ ಯುವಕ ಸಂಘದ ಅಧ್ಯಕ್ಷ ಇಸ್ಮಾಯಿಲ್ ಕಂಡಕರೆ, ಕ್ರೀಡಾಕೂಟಗಳು ಅಚ್ಚುಕಟ್ಟಾಗಿ ಶಿಸ್ತಬದ್ಧವಾಗಿ ನಡೆಯಬೇಕಾಗಿದೆ. ಕ್ರೀಡಾಕೂಟಗಳನ್ನು ಹಣ ಮಾಡುವ ದಂಧೆಯಾಗಿ ಯಾರೂ ಕೂಡ ಬಳಸಬಾರದು. ಕ್ರೀಡಾಕೂಟಗಳು ಕಾಟಾಚಾರಕ್ಕೆ ಆಯೋಜನೆಗೊಳ್ಳಬಾರದು. ಯುವಕರು ಕ್ರೀಡೆಯಲ್ಲಿ ಮಾತ್ರ ಆಸಕ್ತಿವಹಿಸದೆ ತಮ್ಮ ಶಿಕ್ಷಣದ ಕಡೆಗೆ ಹೆಚ್ಚು ಗಮನಕೊಡಬೇಕೆಂದು ಹೇಳಿದರು.
ಕ್ರೀಡಾಕೂಟವನ್ನು ಉದ್ದೇಶಿಸಿ ಚೆಟ್ಟಳ್ಳಿ ಗ್ರಾಮ ಪಂಚಾಯತಿ ಸದಸ್ಯ ಸಿ.ಇ.ತೀರ್ಥಕುಮಾರ್, ಮಾಜಿ ಗ್ರಾಮ ಪಂಚಾಯತಿ ಸದಸ್ಯ ಮೊಹಮ್ಮದ್ ರಫಿ, ಚೆಟ್ಟಳ್ಳಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಜಿ.ಸಿ.ಸತ್ಯನಾರಾಯಣ ಮಾತನಾಡಿದರು.
ಅತ್ಯುತ್ತಮ ಸಮಾಜ ಸೇವಕ ಪ್ರಶಸ್ತಿ: ಗಾಂಧಿ ಯುವಕ ಸಂಘ ಕಂಡಕರೆ ವತಿಯಿಂದ ನೀಡಲಾಗುತ್ತಿರುವ ಅತ್ಯುತ್ತಮ "ಸಮಾಜ ಸೇವಕ" ಪ್ರಶಸ್ತಿಯನ್ನು ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಪ್ರಧಾನ ಕಾರ್ಯದರ್ಶಿ ಪಿ.ಕೆ.ಶಶಿಕುಮಾರ್ ಪಡೆದುಕೊಂಡರು. ಗಾಂಧಿ ಯುವಕ ಸಂಘದ ವತಿಯಿಂದ ಅತಿಥಿಗಳು ಸನ್ಮಾನಿಸಿ ಗೌರವಿಸಿದರು.