ಎಚ್ಚರಿಕೆ ಸ್ಥಿತಿ ಬಿತ್ತಲು ರಂಗಕಲೆಯಿಂದ ಸಾಧ್ಯ: ಸತೀಶ್ ತಿಪಟೂರು

mysore
Published on

ಮೈಸೂರು: ಡಿಜಿಟಲ್ ಮಾಧ್ಯಮಗಳಿಂದ ಉಂಟಾಗಿರುವ ವಿಸ್ಮತಿ ಕಾಲಘಟ್ಟದಲ್ಲಿ ರಂಗಕಲೆಯಿಂದ ಮಾತ್ರ ಸಮಾಜದಲ್ಲಿ ಎಚ್ಚರಿಕೆಯ ಸ್ಥಿತಿ ಸೃಷ್ಟಿಸಲು ಸಾಧ್ಯ ಎಂದು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಹೇಳಿದರು.


ನಿರಂತರ ಫೌಂಡೇಷನ್ ವತಿಯಿಂದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಗುರುವಾರ ಸಂಜೆ ಆಯೋಜಿಸಿದ್ದ ‘ಸಹಜರಂಗ-2024’ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.


5 ವರ್ಷಕ್ಕೆ ತಲೆಮಾರು ಬದಲಾಗುತ್ತದೆ ಎಂದು ಭಾವಿಸಲಾಗುತ್ತಿತ್ತು. ಆದರೀಗ ಅದಕ್ಕಿಂತ ತ್ವರಿತವಾಗಿ ಪರಿವರ್ತನೆಯಾಗುತ್ತಿದೆ. ಎಲ್ಲರಿಗೂ ಕಾಲ ಒಂದೇ. ಆದರೆ, ಹಲವರಿಗೆ ಬೇರೆ ಬೇರೆ. ಒಟ್ಟಿಗೆ ಇದ್ದರೂ ಪ್ರತಿಯೊಬ್ಬರೂ ಪ್ರತ್ಯೇಕ. ಸಮುದಾಯ ಪರಿಕಲ್ಪನೆಯೂ ಇಲ್ಲದ ಕಾಲದಲ್ಲಿ ರಂಗಭೂಮಿ ಹೊಸ ಆಶಾಭಾವದ ಸೆಲೆಯಾಗಿದೆ ಎಂದರು.


ಡಿಜಿಟಿಲ್ ಮಾಧ್ಯಮ, ಕೃತಕಬುದ್ಧಿಮತ್ತೆ ತಂತ್ರಜ್ಞಾನವೇ ಪ್ರಜ್ಞೆಗಳನ್ನು ಆಳುತ್ತಿದೆ. ಇದು ಸೂಚಿಸುವ ದಾರಿಯಲ್ಲಿ ನಾವುಗಳು ಹೋಗಬೇಕಿದೆ. ನಮ್ಮ ನಡೆ ನಮ್ಮ ಕೈಯಲ್ಲಿಲ್ಲ. ನಾವು ಬದುಕುತ್ತಿರುವುದು ನಿಜವಾದ ಬದುಕಲ್ಲ. ಪ್ರಜ್ಞೆಯನ್ನೂ ರೂಪಿಸುತ್ತಿಲ್ಲ. ಮುಂದಿನ 10 ವರ್ಷದಲ್ಲಿ ಯೋಚಿಸುವ ಪ್ರಜ್ಞೆ, ಆಲೋಚಿಸುವ ಬುದ್ಧಿಯೇ ನಿಂತುಹೋಗುವ ಆತಂಕ ಇದೆ ಎಂದು ಕಳವಳ ವ್ಯಕ್ತಪಡಿಸಿದರು.


ಪ್ರಸ್ತುತ ಸಂದರ್ಭದಲ್ಲಿ ಸಮುದಾಯವು ಸಮುದಾಯವಾಗಿ ಉಳಿದಿಲ್ಲ. ವ್ಯಕ್ತಿ ತಾನೇ ರೂಪಿಸಿಕೊಂಡಿರುವ ಚೌಕಟ್ಟಿನಲ್ಲಿ ಬಂಧಿಯಾಗಿದ್ದಾನೆ. ಇದನ್ನೆಲ್ಲ ಹೊಡೆದು ಹಾಕಿ ಸಮುದಾಯದಲ್ಲಿ ಎಚ್ಚರಿಕೆ ಸ್ಥಿತಿ ಬಿತ್ತಲು ರಂಗಕಲೆಯಿಂದಲೇ ಮಾತ್ರ ಸಾಧ್ಯ ಎಂದರು.


ಆಧುನಿಕ ಶಿಕ್ಷಣ ಸಹ ರಂಗಭೂಮಿಯಿಂದ ಮಾತ್ರ. ವಿವಿಧ ಅಧ್ಯಯನ ಶಿಸ್ತೀಯ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದರೂ, ರಂಗಭೂಮಿಯೊಂದಿಗೆ ಯುವ ಜನರು, ಸಾರ್ವಜನಿಕರು ಸಂಬಂಧ ಇಟ್ಟುಕೊಳ್ಳಬೇಕು. ಇದು ಹೊಸ ಚೈತನ್ಯ ಕೊಡುತ್ತದೆ. ನಮ್ಮನ್ನು ಮತ್ತು ನಮ್ಮ ಮಕ್ಕಳನ್ನು ಸೃಜನಾತ್ಮಕವಾಗಿ ಉಳಿಸಿಕೊಳ್ಳುವ ಶಕ್ತಿ ಮಾಧ್ಯಮವೇ ರಂಗಭೂಮಿ ಎಂದು ಹೇಳಿದರು.


ನಿರಂತರ ರಂಗ ಸಂಸ್ಥೆಯ ನಿರ್ದೇಶಕ ಪ್ರಸಾದ್ ಕುಂದೂರು ಮಾತನಾಡಿ, ದಾರಿ ತಪ್ಪಿರುವ ಸಮಾಜದಲ್ಲಿ ವಿವೇಕ, ವಿವೇಚನೆ ಬೆಳೆಸಲು ರಂಗಭೂಮಿ ಸಹಕಾರಿಯಾಗಿದ್ದು, ಇದುವೇ ಉತ್ತಮ ಮನುಷ್ಯನನ್ನು ರೂಪಿಸಿ ಜೀವ ಕ್ರಿಯಾಶೀಲ ಉದ್ದೀಪನಗೊಳಿಸುತ್ತದೆ ಎಂದರು.


ಇಡೀ ಸಮಾಜ ಪಲ್ಲಟಗೊಂಡಿದೆ. ವಿವೇಕದ ಪ್ರತಿಕ್ರಿಯೆ ಕಡಿಮೆಯಾಗಿದೆ. ತ್ವರಿತವಾಗಿ ಬದಲಾಗುತ್ತಿರುವ ಮನಸ್ಥಿತಿಯ ಸಮಾಜದಲ್ಲಿ ಸೂಕ್ಷ್ಮತೆ, ಸಂವೇದನಶೀಲತೆ ಮರೆಯಾಗುತ್ತಿದೆ. ಇಂತಹ ವರ್ತಮಾನದಲ್ಲಿ ವಿದ್ಯಾರ್ಥಿ ಸಮೂಹವೇ ದೇಶ, ಸಮಾಜದ ಭವಿಷ್ಯ. ಇವರಲ್ಲಿ ಮಾತ್ರ ಜೀವಸೆಲೆ, ವೈವಿಧ್ಯತೆ ಗೋಚರವಾಗುತ್ತಿದೆ. ಅವರಲ್ಲಿ ಸೃಜನಶೀಲತೆ ಬಿತ್ತಲು ರಂಗಭೂಮಿಯನ್ನು ಬಳಸಿಕೊಳ್ಳಬೇಕಿದೆ. ಈ ಆಶಯದಡಿ ಈ ರಂಗ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಮೈವಿವಿ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ನರೇಂದ್ರಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net