ಸಾಧಕರನ್ನು ಗುರುತಿಸುವ ಜವಾಬ್ದಾರಿ ನಮ್ಮದು

9 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆ ಸೇರಿ ಇತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರೋತ್ಸಾಹಿಸುವುದು ನಮ್ಮ ಜವಾಬ್ದಾರಿ. ಯುವಕರು ದೇಶದ ಭವಿಷ್ಯ, ಆಶಾಕಿರಣವಾಗಿದ್ದಾರೆ. ಹೀಗಾಗಿ ಅವರ ಸಾಧನೆಗೆ ಪ್ರೋತ್ಸಾಹಿಸಿ ಇನ್ನಷ್ಟು ಸಾಧನೆಗೆ ಪ್ರೇರೇಪಿಸಬೇಕು ಎಂದು ವಿಧಾನ ಪರಿಷತ್​ ಸದಸ್ಯ ಎಸ್​.ವಿ. ಸಂಕನೂರ ಹೇಳಿದರು.

ನಗರದ ಜೆಎಸ್​ಎಸ್​ ಕಾಲೇಜಿನ ಸನ್ನಿಧಿ ಸಭಾಂಗಣದಲ್ಲಿ ಎಕ್ಸಲೆಂಟ್​ ನೀಟ್​ ಅಕಾಡೆಮಿ ವತಿಯಿಂದ ಭಾನುವಾರ ಏರ್ಪಡಿಸಿದ್ದ ವೈದ್ಯಕಿಯ ಸೀಟು ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ನೀಟಿ ಪರೀಕ್ಷೆಗೆ ಹಾಜರಾಗುವ ಹಾಗೂ ಆಯ್ಕೆಯಲ್ಲಿ ಕರ್ನಾಟಕದವರೇ ಹೆಚ್ಚಿದ್ದಾರೆ. ಎಕ್ಸಲೆಂಟ್​ ನೀಟ್​ ಅಕಾಡೆಮಿ ವಿದ್ಯಾರ್ಥಿಗಳು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವುದು ಅಭಿನಂದನಾರ್ಹ. ಆದರೆ ಸಂಸ್ಥೆಯು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಗುರಿ ಹೊಂದಬೇಕು. ಅಂದಾಗಲೇ ಇನ್ನಷ್ಟು ಪ್ರಸಿದ್ಧಿ ಹೊಂದಲು ಸಾಧ್ಯ ಎಂದರು.

ದೇಶದಲ್ಲಿ ವೈದ್ಯರ ಕೊರತೆ ಹೆಚ್ಚಿದೆ. ಇದೇ ಕಾರಣಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವೈದ್ಯಕಿಯ ಸೀಟುಗಳ ಸಂಖ್ಯೆ ಹೆಚ್ಚಳ ಮಾಡಿದ್ದಾರೆ. ಮಕ್ಕಳು ತಮ್ಮಲ್ಲಿನ ಕೀಳರಿಮೆ ಬಿಟ್ಟು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ದೇಶ ಅಭಿವೃದ್ಧಿ ಹೊಂದುವಲ್ಲಿ ಯುವಕರ ಪಾತ್ರ ಮುಖ್ಯ ಎಂಬುದನ್ನು ಅರಿತು ಸಾಧನೆಯತ್ತ ಸಾಗಬೇಕು ಎಂದರು.

ಅಕಾಡೆಮಿ ಅಲ್ಪಾವಧಿಯಲ್ಲೇ ಸಾಧನೆ ಮಾಡಿದೆ. ಸಾಕಷ್ಟು ಸವಾಲು, ಕಷ್ಟಗಳ ನಡುವೆ ತರಬೇತಿ ನೀಡಿ ವೈದ್ಯಕಿಯ ಸೀಟು ಪಡೆಯುವಂತೆ ಮಾಡಿದೆ. ಉತ್ತಮ ಪ್ರಾಧ್ಯಾಪಕರಿದ್ದಾಗಲೇ ಒಂದು ಶಿಕ್ಷಣ ಸಂಸ್ಥೆ ಹೆಸರುವಾಸಿಯಾಗಲು ಸಾಧ್ಯ. ಅಂತಹ ಉತ್ತಮ ಪ್ರಾಧ್ಯಾಪಕರನ್ನು ಹೊಂದಿದ್ದರಿಂದಲೇ ಅಕಾಡೆಮಿ ಉನ್ನತ ಸ್ಥಾನ ತಲುಪಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ನಿಡಸೋಶಿಯ ಶ್ರೀ ದುರದುಂಡೇಶ್ವರ ಸಿದ್ಧ ಸಂಸ್ಥಾನಮಠದ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಲು ಸಾಕಷ್ಟು ಅವಕಾಶಗಳಿವೆ. ಅವುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ವಿದ್ಯಾರ್ಥಿ ಜೀವನ ತಪಸ್ಸಿದ್ದಂತೆ. ಈ ಸಮಯದಲ್ಲಿ ಮೊಬೈಲ್​ನಿಂದ ದೂರವಿದ್ದರೆ ಯಶಸ್ಸು ಸಾಧಿಸಲು ಸಾಧ್ಯ. ಯುವಕರು ಸರಿಯಾದ ಮಾರ್ಗದಲ್ಲಿ ಸಾಗಲು ಸೂಕ್ತ ಮಾರ್ಗದರ್ಶನ ನೀಡಬೇಕು. ಅಕಾಡೆಮಿ ಹೆಸರಿಗೆ ತಕ್ಕಂತೆ ಎಕ್ಸಲೆಂಟ್​ ಆಗಿದೆ ಎಂದರು.

ಪ್ರಾಧ್ಯಾಪಕ ಡಾ. ದೇವರಾಜ ರಾಯಚೂರ ಮಾತನಾಡಿದರು. ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅಧ್ಯಕ್ಷತೆ ವಹಿಸಿದ್ದರು. ವೈದ್ಯಕಿಯ ಸೀಟು ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಅಕಾಡೆಮಿ ಪ್ರಾಧ್ಯಾಪಕರಿಗೆ ಸನ್ಮಾನಿಸಲಾಯಿತು.

ಎಕ್ಸಲೆಂಟ್​ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಶಿವಾನಂದ ಬಿರಾದಾರ, ಎಕ್ಸಲೆಂಟ್​ ನೀಟ್​ ಅಕಾಡೆಮಿ ನಿರ್ದೇಶಕ ಸಚಿನ ಗಿರಿಯಪ್ಪನವರ, ಪ್ರತಾಪ ಟಿ.ಆರ್​., ಮಲೆನಾಡು ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಲ್ಲನಗೌಡ ಪಾಟೀಲ, ಪಾಲಕರು, ಇತರರು ಇದ್ದರು.

ಜಗದೀಶ ಚಿತ್ತರಗಿ ಸ್ವಾಗತಿಸಿದರು. ಎಕ್ಸಲೆಂಟ್​ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಚೇರ್ಮನ್​ ಬಸವರಾಜ ಕೌಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net