

ಶನಿವಾರಸಂತೆ: ಸಮೀಪದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೋಮವಾರಪೇಟೆ ವತಿಯಿಂದ ಕೊಡ್ಲಿಪೇಟೆ ವಲಯದ ಕಿತ್ತೂರು ಕಾರ್ಯಕ್ಷೇತ್ರದಲ್ಲಿ ಪರಿಸರ ಜಾಗೃತಿ ಮತ್ತು ಗಿಡ ನೆಡುವ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
ಹಂಡ್ಲಿ ಗ್ರಾಪಂ ಅಧ್ಯಕ್ಷೆ ಸುಧಾ ಈರೇಶ್ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ರತಿಯೊಬ್ಬರೂ ಗಿಡಗಳನ್ನು ಬೆಳೆಸುವ ಮೂಲಕ ಪರಿಸರವನ್ನು ಸಮೃದ್ಧಿಗೊಳಿಸಬೇಕಿದೆ. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಹತ್ತು-ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಜತೆಗೆ ಪರಿಸರ ಉಳಿವಿಗಾಗಿ ಹಳ್ಳಿ-ಹಳ್ಳಿಗಳಲ್ಲಿ ಜಾಗೃತಿ ಮತ್ತು ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿರುವು ಶ್ಲಾಘನಿಯ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡ್ಲಿಪೇಟೆ ವಲಯ ಮೇಲ್ವಿಚಾರಕ ನಾಗರಾಜು ಕಾರ್ಯಕ್ರಮ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ರೇಖಾ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಿತ್ತೂರು ಒಕ್ಕೂಟದ ಅಧ್ಯಕ್ಷ ನಟರಾಜ್, ಶಾಲಾ ಎಸ್‌ಡಿಎಂಸಿ ಸದಸ್ಯೆ ಸೌಮ್ಯಾ, ಸಹ ಶಿಕ್ಷಕಿ ವಿಶಾಲಾಕ್ಷಿ, ಸೇವಾ ಪ್ರತಿನಿಧಿ ಭಾಗ್ಯಾ, ಅಂಗನವಾಡಿ ಕಾರ್ಯಕರ್ತೆ ಗಿರಿಜಾ, ಪ್ರಮುಖರಾದ ಪ್ರಸಾದ್ ಹಾಜರಿದ್ದರು.
ಪರಿಸರ ಕುರಿತು ಶಾಲಾ ವಿದ್ಯಾರ್ಥಿಗಳಿಗೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಪರಿಸರ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಶಾಲೆಗೆ ಸೇರಿದ ಜಾಗದಲ್ಲಿ ಗಿಡಗಳನ್ನು ನೆಡಲಾಯಿತು.