ಪೊಲೀಸರ ತ್ಯಾಗ, ಬಲಿದಾನ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ

Screenshot_2025-10-24-02-32-40-27.jpg
Published on

ಧಾರವಾಡ: ಸಮಾಜದಲ್ಲಿ ಆಡಳಿತದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ವ್ಯವಸ್ಥೆ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ತ್ಯಾಗ, ಬಲಿದಾನವನ್ನು ಸ್ಮರಿಸುವುದು ಮತ್ತು ಹುತಾತ್ಮರಾದ ಪೊಲೀಸ್ ಸಿಬ್ಬಂದಿಗಳ ಕುಟುಂಬಗಳಿಗೆ ಬೆಂಬಲ, ಸಹಕಾರ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು

ಜಿಪಂ ಸಿಇಒ ಭುವನೇಶ ಪಾಟೀಲ ಹೇಳಿದರು.

ಧಾರವಾಡ ಪೊಲೀಸ್ ಹೆಡ್ ಕ್ವಾಟರ್ಸ್ ನಲ್ಲಿ ಧಾರವಾಡ ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಪೊಲೀಸ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮಲ್ಲರ ರಕ್ಷಣೆ ಹಾಗೂ ನಾಗರಿಕ ಹಕ್ಕುಗಳನ್ನು ಕಾಪಾಡಲು ತಮ್ಮನ್ನು ಕರ್ತವ್ಯದ ಮೂಲಕ ಅರ್ಪಿಸಿಕೊಂಡಿರುವ ಆರಕ್ಷಕರನ್ನು ಯಾವಾಗಲೂ ನಾವು ಗೌರವ, ಹೆಮ್ಮೆಯಿಂದ ಕಾಣಬೇಕು. ಸಮಾಜದಲ್ಲಿ ಮತ್ತು ಸರಕಾರದ ಆಡಳಿತದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ ವ್ಯವಸ್ಥೆ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂದರು.

ಸಮಾಜದ ಸಂರಕ್ಷಣೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಣೆಯಲ್ಲಿ ತಮ್ಮ ಪ್ರಾಣ ತ್ಯಾಗ ಮಾಡುವ ಹಾಗೂ ದೈಹಿಕವಾಗಿ ಊನರಾಗುವ ಪೊಲೀಸ ಅಧಿಕಾರಿ, ಸಿಬ್ಬಂದಿಗಳಿಗೆ, ಅವರ ಕುಟುಂಬಗಳಿಗೆ ಪ್ರತಿಯೊಬ್ಬರು ಬೆಂಬಲ ನೀಡಿ, ಗೌರವಿಸಬೇಕು. ಮತ್ತು ಪೊಲೀಸರ ತ್ಯಾಗ, ಬಲಿದಾನಗಳನ್ನು ಸ್ಮರಿಸುವುದು ನಮ್ಮ ಜವಾಬ್ದರಿ ಎಂದರು.

ಪೊಲೀಸ್ ವ್ಯವಸ್ಯೆ ಸುಧಾರಣೆಗೆ, ಮೂಲಸೌಕರ್ಯ, ಸೌಲಭ್ಯಗಳ ಪೂರೈಸಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಅನೇಕ ಸಮಿತಿಗಳು ಈ ಕುರಿತು ವರದಿ ಸಲ್ಲಿಸಿವೆ. ಸರ್ಕಾರ ಸದಾ ಕಾಲ ಪೊಲೀಸರೊಂದಿಗೆ, ಇಲಾಖೆಯೊಂದಿಗೆ ಇರುತ್ತದೆ ಎಂದರು.

ಪೊಲೀಸ್ ಕುಟುಂಬದ ಸದಸ್ಯರಿಗೂ ನಮ್ಮ ಕೃತಜ್ಞತೆ ತಿಳಿಸಬೇಕಾಗುತ್ತದೆ. ಕುಟುಂಬದವರ ಸಹಕಾರ, ಬೆಂಬಲ, ಪ್ರೇರಣೆ, ಪ್ರೋತ್ಸಾಹಗಳು ಪೊಲೀಸರು ನೆಮ್ಮದಿಯಿಂದ, ತೃಪ್ತಿಯಿಂದ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.

ಪೊಲೀಸ್ ಇಲಾಖೆಗೆ ಸರ್ಕಾರದಿಂದ ಎಲ್ಲ ಹಂತದ ತರಬೇತಿ, ಆಧುನಿಕ ಸೌಲಭ್ಯ ದೊರಕಿಸಲಾಗುತ್ತಿದೆ. ಪೊಲೀಸ್ ವ್ಯವಸ್ಥೆಯ ಆಧುನೀಕರಣವೂ ಅಗತ್ಯವಿದೆ ಎಂದರು.

ವಿಶೇಷ ಆಹ್ವಾನಿತರಾಗಿದ್ದ ಧಾರವಾಡ ಐಐಟಿ ನಿರ್ದೇಶಕ ಪ್ರೊ.ವೆಂಕಪ್ಪಯ್ಯ ದೇಸಾಯಿ ಮಾತನಾಡಿ, ಸಮಾಜಕ್ಕೆ ಪ್ರಾಮಾಣಿಕ ಸೇವೆ ಸಲ್ಲಿಸುವುದು ಎಲ್ಲ ನಾಗರಿಕರ ಜವಾಬ್ದರಿ ಆಗಿದೆ. ಸಮಾಜದ ರಕ್ಷಣೆ, ಶಾಂತಿ ಕಾಪಾಡುವುದು ಬರೀ ಪೊಲೀಸ ಅಧಿಕಾರಿಗಳ, ಸಿಬ್ಬಂದಿಗಳ ಹೊಣೆಗಾರಿಕೆ ಆಗಬಾರದು ಎಂದರು.

ಪೊಲೀಸ ಅಧಿಕಾರಿಗಳ ತ್ಯಾಗ, ಬಲಿದಾನವನ್ನು ನಾವು ಸದಾಕಾಲ ಸ್ಮರಿಸಬೇಕು. ಅವರ ನಿರಂತರ ಕಾವಲಿನಲ್ಲಿ ನಾವು ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ. ದೇಶದ ಆಂತರಿಕ ಭದ್ರತೆಗೆ ಕಾರಣರಾದವರನ್ನು ನಾವು ಅಭಿಮಾನ, ಗೌರವದಿಂದ ಕಾಣಬೇಕು ಎಂದು ಪ್ರೊ. ವೆಂಕಪ್ಪಯ್ಯ ದೇಸಾಯಿ ಅವರು ಹೇಳಿದರು.

ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪೊಲೀಸ ಹುತಾತ್ಮರ ನಾಮಸ್ಮರಣೆ ಮಾಡಿದರು.

ಕಾರ್ಯಕ್ರಮದಲ್ಲಿ ಪೊಲೀಸ ತರಬೇತಿ ಶಾಲೆಯ ಪ್ರಾಂಶುಪಾಲ ಎಂ.ಎಂ.ಯಾದವಾಡ, ಸಿಇಎನ್ ಡಿಎಸ್ಪಿ ಶಿವಾನಂದ ಕಟಗಿ, ಧಾರವಾಡ ಗ್ರಾಮೀಣ ಉಪವಿಭಾಗದ ಡಿಎಸಪಿ ವಿನೋದ ಮುಕ್ತೇದಾರ, ಡಿಎಆರ್ ಡಿಎಸಪಿ ಡಿ.ಎಸ್.ಧನಗರ, ಲೋಕಾಯುಕ್ತ ಪೊಲೀಸ ಉಪ ಅಧೀಕ್ಷಕ ವೆಂಕನಗೌಡ ಪಾಟೀಲ, ಐಎಸಡಿ ಘಟಕದ ಡಿಎಸಪಿ ವೇಣುಗೋಪಾಲ, ಜಿಲ್ಲಾ ಪೊಲೀಸ ಕಚೇರಿಯ ಸಹಾಯಕ ಆಡಾಳಿತಾಧಿಕಾರಿ ಎಂ‌ಎಸ್.ಹಿರೇಮಠ ಸೇರಿದಂತೆ ವಿವಿಧ ಪೊಲೀಸ ಠಾಣೆಗಳ ಸಿಪಿಐ, ಪಿಎಸ್ಐ ಹಾಗೂ ಪೊಲೀಸ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.

ಅತಿಥಿಗಳು, ಗಣ್ಯರು ಹಾಗೂ ಇತರರು ಹುತಾತ್ಮರ ಪೊಲೀಸ ಸ್ಮಾರಕಕ್ಕೆ ಪುಷ್ಪ ಚಕ್ರ (ರೀತ್) ಸಮರ್ಪಿಸಿದರು.

ಪರೇಡ್ ಕಮಾಂಡರ್ ವಿಠ್ಠಲ ಆರೇರ ಅವರ ನೇತೃತ್ವದಲ್ಲಿ

ಎಸ್.ಕುರಗೋಡ ಮತ್ತು ಜಿ.ಎಲ್.ಜಂಜೂರಿ ಅವರ ಡಿಎಆರ್ ಪೊಲೀಸ ತಂಡಗಳಿಂದ ಗೌರವ ಸಮರ್ಪಣೆ ಮಾಡಲಾಯಿತು.

ಡಿಎಆರ್ ವಿಭಾಗದ ಎಆರ್ ಎಸ್ಐ ಎ.ಎಪ್.ಜಿಲ್ಲೇನವರ ಹಾಗೂ ವೈ.ಎಂ.ದೊಡ್ಡಮನಿ ಅವರು ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಹುತಾತ್ಮ ಪೊಲೀಸ ಸಿಬ್ಬಂದಿ, ಅಧಿಕಾರಿಗಳ ಕುಟುಂಬ ಸದಸ್ಯರು, ನಿವೃತ್ತ ಪೊಲೀಸ ಅಧಿಕಾರಿ, ಸಿಬ್ಬಂದಿಗಳು, ಪೊಲೀಸ ಇಲಾಖೆಯ ವಿವಿಧ ಪೊಲೀಸ ಠಾಣೆಗಳ ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net