

ವಿಜಯವಾಣಿ ಸುದ್ದಿಜಾಲ ಧಾರವಾಡ
ಶ್ರೀ ಮೃತ್ಯುಂಜಯ ಅಪ್ಪಗಳ ೧೩೬ನೇ ವರ್ಧಂತಿ ಉತ್ಸವ ನಗರದ ಮುರಘಾಮಠದಲ್ಲಿ ಸೋಮವಾರ ನೆರವೇರಿತು.
ಉತ್ಸವ ನಿಮಿತ್ತ ಬೆಳಗ್ಗೆ ಶ್ರೀಗಳ ಕತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಶ್ರೀಗಳ ಭಾವಚಿತ್ರ ಹಾಗೂ ಗ್ರಂಥಗಳನ್ನು ಪಲ್ಲಕ್ಕಿಯಲ್ಲಿ ಇರಿಸಿ ನಗರದ ವಿವಿಧ ಕಡೆಗಳಲ್ಲಿ ಸಂಚರಿಸಲಾಯಿತು. ಶ್ರೀ ಮಠದಿಂದ ಸವದತ್ತಿ ರಸ್ತೆ ಮಾರ್ಗವಾಗಿ ಸಂಚರಿಸಿದ ಮೆರವಣಿಗೆ ಹಾವೇರಿಪೇಟ ಮುಖ್ಯ ವರ್ತುಳ ತಲುಪಿ ಶ್ರೀ ಮಠಕ್ಕೆ ಆಗಮಿಸಿತು.
ಮುರಘಾಮಠದ ಪೀಠಾಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಸ್ವಾಮಿಜಿ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಶ್ರೀ ಮದಥಣಿ ಶಿವಯೋಗಿಗಳ ಆಶೀರ್ವಾದ ಪಡೆದು ನುಡಿದಂತೆ ನಡೆದು ಬೆಳಗಿನೊಳಗಿನ ಬೆಳಗನ್ನು ಕಂಡ ಶ್ರೀ ಮೃತ್ಯುಂಜಯಪ್ಪಗಳು ಪುಣ್ಯ ಪುರುಷರು. ತನು, ಮನ, ಧನಗಳನ್ನು ಗುರು-ಲಿಂಗ-ಜAಗಮಕ್ಕರ್ಪಿಸಿದ ಪರಮ ದಾಸೋಹ ಮೂರ್ತಿಗಳವರು. ಶ್ರೀಗಳ ದೂರದೃಷ್ಟಿಯ ಪ್ರಸಾದ ನಿಲಯ ಯಶಸ್ವಿಯಾಗಿದ್ದು, ಸಮಾಜ ಕಾರ್ಯಕ್ಕೆ ಲಿಂಗಪೂಜೆಯಷ್ಟೇ ಪ್ರಾಮುಖ್ಯತೆ ಕೊಟ್ಟು ಮುನ್ನಡೆಸಿದ್ದರು. ಇಂತಹ ಇತಿಹಾಸ ಪುರಷರನ್ನು ಸ್ಮರಿಸುವುದು ಭಕ್ತ ವೃಂದದ ಕರ್ತವ್ಯ ಎಂದರು.
ಶ್ರೀ ಗುರುಸಿದ್ದ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಮಠದ ಆಡಳಿತ ಮಂಡಳಿ ಉಪಾಧ್ಯಕ್ಷ ನಾಗರಾಜ ಪಟ್ಟಣಶೆಟ್ಟಿ, ಕಾರ್ಯದರ್ಶಿ ಡಿ.ಬಿ. ಲಕಮನಹಳ್ಳಿ, ವಿರುಪಾಕ್ಷ ಕಟಗಿ, ಮಂಜುನಾಥ ಸಾಲಿಮಠ, ಬಿ.ಎಸ್. ಗಣಾಚಾರಿ, ಶಿವಣ್ಣ ಹೊಸೂರ, ಸತೀಶ ತುರಮರಿ, ಮೃತ್ಯುಂಜಯ, ಬಸವರಾಜ, ಗೌಡಪ್ಪ, ಇತರರು ಇದ್ದರು.