ನೀರು ಪೋಲು ಮಾಡಿದರೆ ಸಂಕಷ್ಟ ತಪ್ಪಿದ್ದಲ್ಲ

22 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನೀರು ಜೀವಜಲವಿದ್ದಂತೆ. ಇದನ್ನು ಮಿತವ್ಯಯವಾಗಿ ಬಳಸದೆ ಪೋಲು ಮಾಡಿದರೆ ಸಂಕಷ್ಟ ತಪ್ಪಿದ್ದಲ್ಲ. ದಕ್ಷಿಣ ಆಫ್ರಿಕಾದ ಕೇಪ್‌ಟೌನ್ ಪಟ್ಟಣವನ್ನು ಈಗಾಗಲೇ ಅತೀ ಕಡಿಮೆ ನೀರಿರುವ ನಗರ ಎಂದು ಗುರುತಿಸಿದ್ದು, ಇಂತಹ ಸ್ಥಿತಿ ಇತರ ನಗರಗಳಿಗೂ ಅನ್ವಯವಾಗುವ ದಿನಗಳು ದೂರವಿಲ್ಲ ಎಂದು ಬೆಳಗಾವಿ ಜೈನ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನ ಪ್ರಾಂಶುಪಾಲ ಡಾ. ಜೆ. ಶಿವಕುಮಾರ ಅಭಿಪ್ರಾಯಪಟ್ಟರು.
ನಗರದ ವಾಲ್ಮಿ ಸಂಸ್ಥೆಯಲ್ಲಿ ಜಲ ಸಂಪನ್ಮೂಲ ಇಲಾಖೆಗೆ ಹೊಸದಾಗಿ ನೇಮಕಗೊಂಡ ಇಂಜಿನಿಯರ್‌ಗಳಿಗೆ ಆರಂಭಿಸಿರುವ ಒಂದು ತಿಂಗಳ ಕಡ್ಡಾಯ ತರಬೇತಿ ಶಿಬಿರಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ನೀರನ್ನು ಯಾವ ರೀತಿ ಪರಿಣಾಮಕಾರಿ, ಸಮರ್ಥ ಹಾಗೂ ಮಿತವ್ಯಯವಾಗಿ ಬಳಸಬೇಕು ಎಂದು ಅರಿಯುವುದು ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಅರಿತುಕೊಳ್ಳುವುದು ಮುಖ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ವಾಲ್ಮಿ ನಿರ್ದೇಶಕ ಪ್ರೊ. ಬಿ.ವೈ. ಬಂಡಿವಡ್ಡರ ಮಾತನಾಡಿ, ನೀರು ಅಮೂಲ್ಯ ಸಂಪತ್ತು. ನೀರು ಪೋಲಾಗುವ ಸ್ಥಳದಲ್ಲೇ ಹಿಡಿದಿಡಲು ಆದ್ಯತೆ ನೀಡಬೇಕು. ಇಂಜಿನಿಯರ್‌ಗಳು ಸೂಕ್ಷ್ಮ, ಹನಿ, ತುಂತುರು ನೀರಾವರಿ, ಇತರ ಆಧುನಿಕ ಪದ್ಧತಿಗಳ ಬಗ್ಗೆ ಅರಿತು ಅತಿ ಕಡಿಮೆ ನೀರಿನಲ್ಲಿ ಯಾವ ರೀತಿ ಕೃಷಿ ಮಾಡಿ ಉತ್ತಮ ಇಳುವರಿ ಪಡೆಯಬಹುದು ಎಂದು ಅರಿಯಬೇಕು ಎಂದರು.
ಕೃವಿವಿ ನಿವೃತ್ತ ಉಪ ಕುಲಪತಿ ಡಾ.ವಿ.ಐ. ಬೆಣಗಿ, ಸುವರ್ಣಾ ದೊಡ್ಡಮನಿ, ಪ್ರೊ. ಬಿ.ಎಚ್. ಪೂಜಾರ, ಪ್ರೊ. ಚನ್ನಯ್ಯ ಕೊಪ್ಪದ, ಪ್ರೊ. ಎನ್. ಹನುಮಂತಪ್ಪ, ಶೈಲಜಾ ಹೊಸಮಠ, ಸುನಂದಾ ಸೀತೋಳೆ, ಮಹಾದೇವಗೌಡ ಹುತ್ತನಗೌಡರ, ಸುರೇಶ ಕುಲಕರ್ಣಿ, ನಾಗರತ್ನಾ ಹೊಸಮನಿ, ಇತರರು ಇದ್ದರು.
ಚೇತನ ಪ್ರಭಾಚಂದ್ರ ಶೆಟ್ಟಿ ಸ್ವಾಗತಿಸಿದರು. ಅನುರಾಧಾ ಮಳಗಿ, ಫಕ್ಕೀರೇಶ ಅಗಡಿ ನಿರೂಪಿಸಿದರು. ಪ್ರಭಾಕರ ಹಾದಿಮನಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net