

ಮುದ್ದೇಬಿಹಾಳ: ರಾಜಕಾರಣದಲ್ಲಿ ಟೀಕೆಗಳು ಸೈದ್ಧಾಂತಿಕವಾಗಿದ್ದು, ಬೆಳವಣಿಗೆಗೆ ಆಧಾರವಾಗುವಂತಿರಬೇಕು. ಚಪಲದಿಂದ ಕೂಡಿದ, ಜನರ ದಾರಿ ತಪ್ಪಿಸುವ ಟೀಕೆಗಳು, ಬಾಯಿಗೆ ಬಂದಂತೆ ಮಾತನಾಡುವ ಪ್ರವೃತ್ತಿ ಸರಿಯಲ್ಲ, ಜನಪ್ರತಿನಿಧಿ ಸರಳವಾಗಿರಬೇಕೆಂದು ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಹೇಳಿದರು.
ಇಲ್ಲಿನ ಗ್ರಾಮದೇವತೆ ಕಟ್ಟೆ ಎದುರು ಪುರಸಭೆ ಅಧೀನದ ಮೆಗಾ ಮಾರ್ಕೆಟ್ ಕಾಮಗಾರಿಗೆ ಗುರುವಾರ ಸಂಜೆ ಭೂಮಿಪೂಜೆ ನೆರವೇರಿಸಿ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಶಾಸಕನಾಗಿ ಜನರ ಬೇಡಿಕೆ ಸರ್ಕಾರದ ಮಟ್ಟಕ್ಕೊಯ್ದು ಮಾಡಿಸಿಕೊಡುವುದು ನನ್ನ ಕರ್ತವ್ಯ. ಬಜೆಟ್ ಮಂಡನೆ ಬಳಿಕ ಅಭಿವೃದ್ಧಿಗೆ ತಂದಿರುವ ಅನುದಾನದ ಬಗ್ಗೆ ಶ್ವೇತಪತ್ರ ಹೊರಡಿಸಲು ಸಿದ್ಧನಿದ್ದೇನೆ. ಟೀಕಿಸುವವರಿಗೆ ಉತ್ತರ ಕೊಡೊಲ್ಲ, ಜನತೆಗೆ ಉತ್ತರಿಸುತ್ತೇನೆ ಎಂದರು.
ಊರಿನ ಬೆಳವಣಿಗೆಯಲ್ಲಿ ಹಿಂದಿನ ಎಲ್ಲ ಶಾಸಕರ ಪಾಲಿದೆ. ನಾನು, ನನ್ನಿಂದ ಅನ್ನೋದು ರಾಜಕಾರಣದಲ್ಲಿ ಇರಬಾರದು. ಅಗತ್ಯ ಬಂದರೆ ನನ್ನ ಪಾತ್ರವಿದೆ ಎನ್ನಬೇಕು. ಅಭಿವೃದ್ಧಿಗೆ ಜನರ ಸಹಕಾರ ಬಹಳ ಮುಖ್ಯ. ಹಣಕಾಸಿನ ವ್ಯವಸ್ಥೆಯಲ್ಲಿ ಸರ್ಕಾರದ ಸ್ಥಿತಿ ತಂತಿಯ ಮೇಲಿನ ನಡಿಗೆಯಂತಿದೆ. ಸೋರಿಕೆ ತಡೆದು, ಬಡವರ ಅಭಿವೃದ್ಧಿಗೆ ಪಂಚ ಗ್ಯಾರಂಟಿಗೆ ವಾರ್ಷಿಕ 63,000 ಕೋಟಿ ರೂ. ಖರ್ಚಾಗುತ್ತದೆ. ಸರ್ಕಾರದ ದಿವಾಳಿ ಎಂದವರೇ ಇಂದು ಅದನ್ನೇ ಅಳವಡಿಸಿಕೊಳ್ಳುತ್ತಿದ್ದಾರೆ. ಬಸವಣ್ಣನವರು ಹೇಳಿದಂತೆ ಸಮಾಜದಲ್ಲಿ ಎಲ್ಲರೂ ಸಮಾನರಾಗಿ ಬಾಳಿದಾಗ ಮಾತ್ರ ಸಮಾನತೆ ಸಾಧ್ಯ. ನಮ್ಮ ಪಕ್ಷವೂ ಇದೇ ಸಿದ್ಧಾಂತ ಹೊಂದಿದ್ದು ಇದು ದೇಶದ ಸಿದ್ಧಾಂತವಾಗಬೇಕು ಎಂದರು.
ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಮಾತನಾಡಿ, 1960ರಲ್ಲಿ ಆಗಿನ ಶಾಸಕ ಎಸ್.ಎಂ. ಗುರಡ್ಡಿಯವರ ಅವಧಿಯಲ್ಲಿ ನಿರ್ಮಾಣಗೊಂಡು ಶಿಥಿಲಾವಸ್ಥೆಯಲ್ಲಿದ್ದ ಹಳೇ ಮಾರ್ಕೆಟನ್ನು ಪಿಡಬ್ಲುಡಿ ಇಂಜಿನಿಯರ್‌ಗಳ ಸಲಹೆ ಮೇರೆಗೆ 2022ರಲ್ಲಿ ನೆಲಸಮಗೊಳಿಸಲಾಯಿತು. ಶಾಸಕರ ಸತತ ಪ್ರಯತ್ನದಿಂದ 15 ಕೋಟಿ ರೂ. ಅನುದಾನದಲ್ಲಿ ಮೂರು ಅಂತಸ್ತಿನ, 46 ಮಳಿಗೆಯುಳ್ಳ ಸುಸಜ್ಜಿತ ಮಾರ್ಕೆಟ್ ನಿರ್ಮಿಸಲಾಗುತ್ತಿದೆ ಎಂದರು.
ಕಸಾಪ ಗೌರವಾಧ್ಯಕ್ಷ ಎಂ.ಬಿ. ನಾವದಗಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಂಕರಗೌಡ ಹಿರೇಗೌಡರ ಮಾತನಾಡಿದರು. ಪುರಸಭೆ ಅಧ್ಯಕ್ಷ ಮಹಿಬೂಬ್ ಗೊಳಸಂಗಿ ಅಧ್ಯಕ್ಷತೆರ ವಹಿಸಿದ್ದರು.
ಪುರಸಭೆ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲಪ್ಪ ನಾಯಕಮಕ್ಕಳ, ತಹಸೀಲ್ದಾರ್ ಬಲರಾಮ ಕಟ್ಟಿಮನಿ, ಗಣ್ಯರಾದ ಬಸವರಾಜ ಮೋಟಗಿ, ಪ್ರೊ.ಬಿ.ಎಂ. ಹಿರೇಮಠ, ದಾನಪ್ಪ ನಾಗಠಾಣ, ಬಸನಗೌಡ ಪಾಟೀಲ, ಹಣಮಂತ್ರಾಯ ಬಿರಾದಾರ, ಪ್ರಭು ಕಡಿ, ಗುಲಾಬಚಂದ ಓಸ್ವಾಲ್, ಗುರು ತಾರನಾಳ, ಕಾಮರಾಜ ಬಿರಾದಾರ, ಸುರೇಶಗೌಡ ಪಾಟೀಲ ಇಂಗಳಗೇರಿ, ಎನ್.ಎಸ್. ಚಟ್ಟೇರ, ಗಫೂರ ಮಕಾನದಾರ, ಸತೀಶ ಓಸ್ವಾಲ್, ಬಾಪೂರಾವ ದೇಸಾಯಿ, ರುದ್ರಗೌಡ ಅಂಗಡಗೇರಿ, ವೈ.ಎಚ್. ವಿಜಯಕರ್, ಪಿಂಟು ಸಾಲಿಮನಿ, ಶೋಭಾ ಶಳ್ಳಗಿ, ನೀಲಮ್ಮ ಚಲವಾದಿ, ಪುರಸಭೆ ಚುನಾಯಿತ, ನಾಮನಿರ್ದೇಶಿತ, ಆಶ್ರಯ ಕಮಿಟಿ ಸದಸ್ಯರು ಇದ್ದರು.
ಬಾಲ ಗಾಯಕಿ ಮಹನ್ಯಾ ಪಾಟೀಲ ಪ್ರಾರ್ಥಿಸಿದರು. ಗಾಯಕ ಮ್ಯೂಜಿಕ್ ಮೈಲಾರಿ ಶಾಸಕರ ಕುರಿತಾದ ಜಾನಪದ ಗೀತೆ ಹಾಡಿದರು. ಬಿಆರ್‌ಪಿ ಸಿದ್ದನಗೌಡ ಬಿಜ್ಜೂರ ಸ್ವಾಗತಿಸಿದರು. ಸಿಆರ್‌ಪಿ ಜಿ.ಎಚ್. ಚವಾಣ್, ಕಲಾವಿದ ಶ್ರೀಶೈಲ ಹೂಗಾರ ನಿರೂಪಿಸಿದರು.
ಇದಕ್ಕೂ ಮುನ್ನ ಶಾಸಕರನ್ನು ಡೊಳ್ಳು ಮೆರವಣಿಗೆಯೊಂದಿಗೆ ಸ್ವಾಗತಿಸಿಕೊಳ್ಳಲಾಯಿತು. ಇಂಚರ ಮೆಲೋಡಿಸ್ ಕಲಾ ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಮುದ್ದೇಬಿಹಾಳದಲ್ಲಿ ಶೀಘ್ರ ಸಿಟಿ ಬಸ್ ಸಂಚರಿಸಲಿದೆ. ಮೆಗಾ ಮಾರ್ಕೆಟ್ 100 ವರ್ಷಗಳಾದರೂ ಗಟ್ಟಿಯಾಗಿ ನಿಲ್ಲುವಂತ ಕಟ್ಟಡವಾಗಲು ಸಾರ್ವಜನಿಕರ ಕಣ್ಣು ಕೆಲಸದ ಗುಣಮಟ್ಟದ ಮೇಲಿರಬೇಕು.
| ಸಿ.ಎಸ್. ನಾಡಗೌಡ, ಶಾಸಕರು.