

ಮೈಸೂರು: ಪಾಲಕರು ತಮ್ಮ ಇಚ್ಛೆಯನ್ನು ಮಕ್ಕಳ ಮೇಲೆ ಹೇರುವುದು ಸರಿಯಲ್ಲ ಎಂದು ಚಾಮರಾಜನಗರ ದೀನಬಂಧು ಟ್ರಸ್ಟ್ ಕಾರ್ಯದರ್ಶಿ ಜಿ.ಎಸ್.ಜಯದೇವ ಅಭಿಪ್ರಾಯಪಟ್ಟರು.
ನಗರದ ಹೊರವಲಯದ ಕೆಂಚಲಗೂಡಿನಲ್ಲಿರುವ ದಿವ್ಯ ದೀಪ ಚಾರಿಟಬಲ್ ಟ್ರಸ್ಟಿನ ‘ಕಲಿಯುವ ಮನೆ’ ಉಚಿತ ವಸತಿ ಪರ್ಯಾಯ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಎಂ.ಆರ್.ಅನಂತಕುಮಾರ್ ವಿರಚಿತ ‘ಮಕ್ಕಳಿಗಾಗಿ ಶಾಲೆ: ಶಾಲೆಗಾಗಿ ಮಕ್ಕಳಲ್ಲ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಪಾಲಕರ ಒತ್ತಡದಿಂದಾಗಿ ಮಕ್ಕಳು ಕೇವಲ ಅಂಕದ ಹಿಂದೆ ಓಡುತ್ತಿದ್ದಾರೆ. ಇಂತಹ ವಾತಾವರಣ ಸರಿಯಲ್ಲ. ತಮ್ಮ ಇಚ್ಛೆಯನ್ನು ಮಕ್ಕಳ ಮೇಲೆ ಹೇರುವುದರಿಂದ ಅವರ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಮಕ್ಕಳನ್ನು ಅವರ ಅಭಿರುಚಿ, ಸಾಮರ್ಥ್ಯಕ್ಕೆ ತಕ್ಕಂತೆ ಪ್ರೋತ್ಸಾಹಿಸುವ ಮನೋಭಾವವನ್ನು ಕಡ್ಡಾಯವಾಗಿ ಬೆಳೆಸಿಕೊಳ್ಳಬೇಕು ಸಲಹೆ ನೀಡಿದರು.
ಪ್ರತಿ ಮಗುವೂ ವಿಶಿಷ್ಟ ಗುಣಲಕ್ಷಣ, ಸಾಮರ್ಥ್ಯ ಹೊಂದಿರುತ್ತದೆ. ಸರಿಯಾದ ಮಾರ್ಗದರ್ಶನ ನೀಡಿ ಅವರಿಗೆ ಅವಕಾಶ ಒದಗಿಸಿದರೆ ಅವರ ಪ್ರತಿಭೆ ಬೆಳಕಿಗೆ ತರಬಹುದು. ‘ಮಕ್ಕಳಿಗಾಗಿ ಶಾಲೆ, ಶಾಲೆಗಾಗಿ ಮಕ್ಕಳಲ್ಲ’ ಎನ್ನುವ ಘೋಷ ವಾಕ್ಯವೂ ಅರ್ಥಗರ್ಭಿತ. ಇದನ್ನು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಬೇಕು. ಕಲಿಯುವ ಮನೆಯ ಪಯಣವನ್ನು ಪುಸ್ತಕದಲ್ಲಿ ಹಂಚಿಕೊಂಡಿದ್ದು, ಅನುಭವವನ್ನು ಅಕ್ಷರ ರೂಪದಲ್ಲಿ ಇಳಿಸಿದ್ದಾರೆ ಎಂದರು.
ಮಕ್ಕಳನ್ನು ಸಾಕುವ ಕೆಲಸ ಸುಲಭವಲ್ಲ. ಕಲಿಯುವ ಮನೆ ಶಾಲೆಯಲ್ಲಿ ಮಕ್ಕಳಿಗೆ ಯಾವುದೇ ಒತ್ತಡವಿಲ್ಲ. ಸಂತೋಷದಾಯಕ ಕಲಿಕೆ ಇಲ್ಲಿ ಲಭಿಸುತ್ತಿದೆ. ಮಕ್ಕಳ ಶಕ್ತಿ ಗುರುತಿಸಿ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.
ಕಲಿಯುವ ಮನೆ ಶಾಲೆ ಸ್ಥಾಪಕ ಎಂ.ಆರ್.ಅನಂತಕುಮಾರ್ ಮಾತನಾಡಿ, ಶಿಕ್ಷಣ ವಂಚಿತ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯ ಮಾಡಲಾಗುತ್ತಿದೆ. ಕಲಿಯಬೇಕು ಮತ್ತು ಕಲಿಸಬೇಕು ಎಂಬುದು ಅಷ್ಟೇ ಮುಖ್ಯ. ಎಲ್ಲ ತೊಂದರೆಗಳ ಮಧ್ಯೆ ಸಾರ್ವಜನಿಕರ ಸಹಾಯದಿಂದ ಶಾಲೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ರವೀಂದ್ರ ಭಟ್ಟ, ಹಿರಿಯ ವಿದ್ಯಾರ್ಥಿಗಳಾದ ಮಹೇಶ, ಅಮೂಲ್ಯಾ ಹಾಜರಿದ್ದರು.