ಸಮೀಕ್ಷೆಗೂ ಮೊದಲೇ ಜಾತಿ ಗಣತಿ ವಿರೋಧಿಸುವುದು ಸರಿಯಲ್ಲ: ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್

k.v.mallesh
Published on

ಮೈಸೂರು: ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸರ್ಕಾರ ಬಿಡುಗಡೆ ಮಾಡುವುದಕ್ಕೂ ಮೊದಲೇ ಕೇವಲ ಊಹಾಪೋಹಗಳ ಆಧಾರದ ಮೇಲೆಯೇ ವಿರೋಧಿಸುತ್ತಿರುವುದು ಸರಿಯಾದ ನಡೆಯಲ್ಲ ಎಂದು ನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್ ತಿಳಿಸಿದ್ದಾರೆ.

ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಮಾತು ಕೃತಿಯಲ್ಲಿ ಮೂಡಬೇಕೆಂದರೆ ಈ ಸಮೀಕ್ಷೆಯ ಜಾರಿ ಅತ್ಯಗತ್ಯವಾಗಿದೆ. ಸ್ವಾತಂತ್ರೃ ಬಂದು ಇಷ್ಟು ವರ್ಷಗಳಾದರೂ ಅವಕಾಶ ವಂಚಿತರ ಸಂಖ್ಯೆಯೇನೂ ಕಡಿಮೆಯಿಲ್ಲ. ಅದಕ್ಕೆ ಕಾರಣ ಬಲಾಢ್ಯ ಸಮುದಾಯಗಳು ಮತ್ತು ಸಮುದಾಯದ ಬಲಾಢ್ಯರು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅವಕಾಶ ವಂಚಿತರು, ದರ್ಬಲ ವರ್ಗಗಳ ಸಬಲೀಕರಣಕ್ಕೆ ಈ ಜಾತಿ ಸಮೀಕ್ಷೆಯ ಜಾರಿ ಅಗತ್ಯವಾಗಿದೆ. ಹಲವು ಬಲಾಢ್ಯ ಸಮುದಾಯಗಳು ತಮ್ಮ ಸಂಖ್ಯೆ ಇನ್ನಷ್ಟಿದೆ ಎಂದು ಹೇಳುತ್ತಿವೆ. ಆದರೆ, ವಾಸ್ತವದಲ್ಲಿ ಆ ಸಮುದಾಯಗಳು ಹೇಳಿಕೊಳ್ಳುವ ಉಪ ಜಾತಿಗಳು ತಮ್ಮನ್ನು ಪ್ರತ್ಯೇಕವಾಗಿಯೇ ಗುರುತಿಸಿಕೊಳ್ಳಲು ಇಷ್ಟಪಡುತ್ತಿವೆ. ಹೀಗಿರುವಾಗ ಸಮೀಕ್ಷೆಯ ಸಂಪೂರ್ಣ ಬಿಡುಗಡೆಗೂ ಮೊದಲೇ ವಿರೋಧ ವ್ಯಕ್ತಪಡಿಸುತ್ತಿರುವುದು ರಾಜಕೀಯ ದುರುದ್ದೇಶವಲ್ಲದೇ ಮತ್ತೇನೂ ಅಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟಿರುವ ಪಕ್ಷ ಕಾಂಗ್ರೆಸ್ ತನ್ನ ಇತಿಹಾಸದಲ್ಲಿ ದಲಿತರು, ಬಡವರು, ಅಲ್ಪಸಂಖ್ಯಾತರು, ಶೋಷಿತರ ಅಭಿವೃದ್ಧಿಗಾಗಿ, ಅವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಸಿದ್ದರಾಮಯ್ಯ ಅವರೂ ಅದೇ ಹಾದಿಯಲ್ಲಿ ಸಾಗುತ್ತಿರುವುದಕ್ಕೆ ಈ ಜಾತಿ ಸಮೀಕ್ಷೆ ಒಂದು ಉದಾಹರಣೆಯಷ್ಟೆ.

ಜಾತಿ ಗಣತಿ ಮಾಡಿಸಿ ಆ ಮೂಲಕ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸಬೇಕಾದ ಮಹತ್ತರ ಹೊಣೆಗಾರಿಕೆ ಕೇಂದ್ರ ಸರ್ಕಾರದ ಮೇಲಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಭರವಸೆ ನೀಡುವಂತೆ ಮುಂದಿನ ವರ್ಷ ನಡೆಯುವ ಜನಗಣತಿ ಜತೆಯಲ್ಲೇ ಜಾತಿ ಗಣತಿಯನ್ನೂ ಮಾಡಿಸಲಿ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net