

ಆನಂದಪುರ: ಶಾಸಕ ಗೋಪಾಲಕೃಷ್ಣ ಬೇಳೂರು ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಅಧಿಕಾರಿಗಳ ಮೇಲೆ ಒತ್ತಡ ಹೇರಿ ಬಿಜೆಪಿ ಬೆಂಬಲಿತ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಅವರ ಮೇಲೆ ಅನಗತ್ಯ ಕೇಸ್ ಹಾಕಿಸುತ್ತಿದ್ದಾರೆ ಎಂದು ಜಿಪಂ ಮಾಜಿ ಸದಸ್ಯ ಹೊನಗೋಡು ರತ್ನಾಕರ್ ಆರೋಪಿಸಿದರು.
ಕಾಗೋಡು ತಿಮ್ಮಪ್ಪ ಅವರು ಯಾವತ್ತೂ ಇಂತಹ ಕೆಟ್ಟ ರಾಜಕಾರಣ ಮಾಡಿರಲ್ಲ. ಅವರ ಕೃಪೆಯಿಂದ ಜನತೆಯ ಮತ ಗಳಿಸಿ ಇಂದು ಜನರನ್ನು ಪಕ್ಷಾತೀತವಾಗಿ ಕಾಣದೆ ಬಿಜೆಪಿಯವರು ಏನು ಮಾಡಲು ಹೋದರೂ ಅವರಲ್ಲಿ ಬೆದರಿಕೆಯ ವಾತಾವರಣ ಸೃಷ್ಟಿಸುತ್ತಿದ್ದಾರೆ. ಇದು ಯೋಗ್ಯವಾದುದಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಶಾಸಕರು ಕೇವಲ ಕಾಂಗ್ರೆಸ್ ಶಾಸಕರಲ್ಲ. ಕ್ಷೇತ್ರದ ಎಲ್ಲರನ್ನೂ ಒಂದೇ ರೀತಿ ಕಾಣಬೇಕು. ತಪ್ಪಿತಸ್ಥರು ಯಾವ ಪಕ್ಷಕ್ಕೆ ಸೇರಿದ್ದರೂ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರಿಗೆ ಹೇಳುವುದನ್ನು ಬಿಟ್ಟು ಕೇವಲ ಬಿಜೆಪಿಯವರನ್ನು ಗುರಿಪಡಿಸುವುದು ಸರಿಯಲ್ಲ ಎಂದರು.
ಬಿಜೆಪಿ ಪ್ರಮುಖರಾದ ಆಚಾಪುರ ಶಾಂತಕುಮಾರ್ ಗೌಡ, ಜಿಪಂ ಮಾಜಿ ಸದಸ್ಯ ಭರ್ಮಪ್ಪ, ಪ್ರಮುಖರಾದ ಹೊಸಕೊಪ್ಪ ರೇವಪ್ಪ, ಪರಮೇಶ್ ಇದ್ದರು.