ಮಠಗಳನ್ನು ಸರ್ಕಾರಕ್ಕೆ ಹೋಲಿಸುವುದು ಸರಿಯಲ್ಲ, ಸರ್ಕಾರವೇ ಸಾರ್ವಭೌಮ : ಎಚ್. ವಿಶ್ವನಾಥ್

Vishwanath
Published on

ಮೈಸೂರು: ಯಾರು ಸಹ ಮಠಗಳನ್ನು ಸರ್ಕಾರಕ್ಕೆ ಹೋಲಿಸಬಾರದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾದ ಸರ್ಕಾರವೇ ಸಾರ್ವಭೌಮ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.

ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಗರದ ಕಲಾಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಯಾವುದೇ ಇಲಾಖೆಯಲ್ಲಿ ರಾಜಕೀಯ ನಡೆಯಲಿ. ಆದರೆ, ಶಿಕ್ಷಣ ಮತ್ತು ಆರೋಗ್ಯ ಇಲಾಖೆಯಲ್ಲಿ ರಾಜಕಾರಣ ತರಬಾರದು ಎಂದರು.

ಶಿಕ್ಷಕರ ದಿನಾಚರಣೆ ಕಾರ್ಯಕ್ರಮವೊಂದರಲ್ಲಿ ವ್ಯಕ್ತಿಯೊಬ್ಬರು ಸ್ವಾಮೀಜಿಗಳನ್ನು ಓಲೈಸಿಕೊಳ್ಳುವ ಸಲುವಾಗಿ ‘ಸರ್ಕಾರ ಮಾಡಲಾಗದ ಕೆಲಸವನ್ನು ಸ್ವಾಮೀಜಿಗಳು ಮಾಡುತ್ತಿದ್ದಾರೆ’ ಎಂದು ಹೇಳಿಕೆ ನೀಡಿದ್ದರು. ಸ್ವಾಮೀಜಿಗಳು ಮಕ್ಕಳಿಗೆ ಅನ್ನ ಹಾಗೂ ಅಕ್ಷರ ನೀಡುತ್ತಿರುವುದು ನಿಜ. ಆದರೆ, ಸರ್ಕಾರಕ್ಕಿಂತ ದೊಡ್ಡವರು ಯಾರು ಇಲ್ಲ, ಸರ್ಕಾರವೇ ಸಾರ್ವಭೌಮ, ಜನತಂತ್ರ ವ್ಯವಸ್ಥೆಯಲ್ಲಿ ಜನಾದೇಶ ಸರ್ಕಾರ ಪಡೆದ ಸರ್ಕಾರ ಸಾರ್ವಭೌಮ. ಅಂತಹ ಸಾರ್ವಭೌಮ ಸರ್ಕಾರವನ್ನು ಟೀಕಿಸಿ ಸರ್ಕಾರಕ್ಕಿಂತ ಸ್ವಾಮೀಜಿಗಳೇ ದೊಡ್ಡವರು ಎಂದು ಹೇಳುವುದು ಸರಿಯಲ್ಲ. ನಾನು ಆ ಸಂದರ್ಭ ಹಾಗೆಲ್ಲ ಮಾತಾಡಬಾರದು ಎಂದು ಆ ವ್ಯಕ್ತಿಗೆ ಸಲಹೆ ನೀಡಿದ್ದೆ. ರಾಜ್ಯದಲ್ಲಿ 1.30 ಕೋಟಿ ಮಕ್ಕಳು ಇದ್ದರೆ, ಹಾಗಾದರೆ ಆ ಮಕ್ಕಳನ್ನೆಲ್ಲ ಸ್ವಾಮೀಜಿಗಳು ನೋಡಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಮಠಗಳನ್ನು ಸರ್ಕಾರಕ್ಕೆ ಹೋಲಿಸಬಾರದು ಎಂದು ನಾನು ನೀಡಿದ ಸಲಹೆಗೆ ಸ್ವಾಮೀಜಿಗಳು ಕೋಪ ಮಾಡಿಕೊಂಡು ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಬಳಿ ಅಸಮಾಧಾನ ತೋಡಿಕೊಂಡರು. ಅದರ ಪರಿಣಾಮ ನನ್ನನ್ನು ಶಿಕ್ಷಣ ಇಲಾಖೆಯಿಂದ ಹೊರಗೆ ಕಳುಹಿಸಲಾಯಿತು. ಅದರಿಂದ ನನಗೇನು ಅನ್ಯಾಯವಾಗಲಿಲ್ಲ, ನನಗೆ ಸಹಕಾರ ಇಲಾಖೆ ನೀಡಿದರು. ಅಲ್ಲೂ ಸಹ ಒಳ್ಳೆಯ ಕೆಲಸ ಮಾಡಿದೆ. ನಾನು ಪ್ರಶ್ನೆ ಕೇಳಿದ್ದಕ್ಕೆ ನನ್ನನ್ನು ಶಿಕ್ಷಣ ಸಚಿವ ಸ್ಥಾನದಿಂದ ಆಚೆ ಕಳುಹಿಸಿಬಿಟ್ಟರು. ರಾಜಕಾರಣದ ಸೋಂಕು ಅಕ್ಷರ ಹಾಗೂ ಆರೋಗ್ಯ ಕ್ಷೇತ್ರಕ್ಕೆ ತಗುಲಬಾರದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net