ಮೈಸೂರು: ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ಯೋಜನೆಗಳ ಪ್ರಯೋಜನ ಪಡೆಯುವವರ ಪಟ್ಟಿಯಿಂದ ಕ್ರೈಸ್ತ ಧರ್ಮ ಕೈಬಿಟ್ಟಿರುವುದು ಸರಿಯಲ್ಲ ಎಂದು ಪ್ರೊಟಸ್ಟೆಂಟ್ ಕ್ರೈಸ್ತರ ಮಹಾಸಭಾ, ಡಯೋಸಿಸ್ ಆಫ್ ಪ್ರೊಟೆಸ್ಟೆಂಟ್ ಚರ್ಚ್ ಸಂಸ್ಥೆಗಳು ಒತ್ತಾಯಿಸಿವೆ.
ಈ ಹಿಂದೆ ನಿಗಮ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕ್ರೈಸ್ತ ಧರ್ಮ ಸೇರ್ಪಡೆ ಮಾಡಿಕೊಂಡಿತ್ತು. ಆದರೆ ಈಗ ಏಕಾಏಕಿ ತೆಗೆದು ಹಾಕಿರುವುದರಿಂದ ಕ್ರೈಸ್ತ ಸಮುದಾಯದ ಶಿಕ್ಷಣ, ಇನ್ನಿತರ ಸವಲತ್ತು ದೊರೆಯದಂತಾಗಿದೆ ಎಂದು ಸಂಸ್ಥೆಯ ಬಿಷಷ್ ಸುನೀಲ್ ಜಾಕೋಬ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪಿಸಿರುವ ಕಾರಣದಿಂದ ಅಲ್ಪ ಸಂಖ್ಯಾತ ಇಲಾಖೆಯಿಂದ ದೊರೆಯುತ್ತಿದ್ದ ಸೌಲಭ್ಯವನ್ನು ತೆಗೆದು ಹಾಕಲಾಗಿದೆ ಎಂಬ ಉತ್ತರ ಬರುತ್ತಿದೆ. ಆದರೆ ಇತರ ಧರ್ಮಗಳಿಗೂ ಪ್ರತ್ಯೇಕ ನಿಗಮ, ಮಂಡಳಿಗಳು ಇದ್ದರೂ ಅಲ್ಪ ಸಂಖ್ಯಾತರ ಇಲಾಖೆಯಿಂದ ಸೌಲಭ್ಯ ಮುಂದುವರಿಸಿ, ಕೇವಲ ಕ್ರೈಸ್ತ ಧರ್ಮ ಕೈಬಿಡಲಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಕ್ರೈಸ್ತ ಅಭಿವೃದ್ಧಿ ನಿಮಗಕ್ಕೆ ಸೂಕ್ತ ಕಚೇರಿ ಇಲ್ಲ. ಸಿಬ್ಬಂದಿಯೂ ಇಲ್ಲ. ತಕ್ಕ ಪ್ರಮಾಣದಲ್ಲಿ ಹಣ ಬಿಡುಗಡೆಗೊಳಿಸಿಲ್ಲ. ಹೀಗಾಗಿ ಸರ್ಕಾರ ಈ ಎಲ್ಲ ನ್ಯೂನತೆ ಸರಿಪಡಿಸಬೇಕು. ಅಲ್ಲಿಯ ವರೆಗೆ ಅಲ್ಪ ಸಂಖ್ಯಾತ ಇಲಾಖೆಯಿಂದ ದೊರೆಯಬೇಕಿರುವ ಸೌಲಭ್ಯ ಮುಂದುವರಿಸಬೇಕು ಎಂದು ಮುಖ್ಯಮಂತ್ರಿಗಳನ್ನು ಕೋರಿದರು.
ಸಂಘಟನೆಯ ಡಾ.ವಿನೋದ್ ಎಂ.ಚಾಕೋ, ಅಲೆಕ್ಸ್ ಮೈಕೆಲ್, ಶಿವಕುಮಾರ್, ಫ್ರಾನ್ಸಿಸ್ ಸೇವಿಯರ್ ಇತರರು ಇದ್ದರು.