ರಾಜ್ಯ ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆಗೆ ಮುಂದಾಗಿರುವುದು ಸರಿಯಲ್ಲ : ಎಚ್. ವಿಶ್ವನಾಥ್

H Vishwanath
Published on

ಮೈಸೂರು: ರಾಜ್ಯ ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆಗೆ ಮುಂದಾಗಿರುವುದು ಸರಿಯಲ್ಲ. ಶಾಲೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಸರ್ಕಾರ ಆತುರ ತೋರಬಾರದು ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.

ಇದೀಗ ಪಠ್ಯಪುಸ್ತಕ ಪರಿಷ್ಕರಣೆ ಮಾಡಿದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಪಠ್ಯಪುಸ್ತಕ ಪರಿಷ್ಕರಣೆ ಮಾಡುವುದೇ ಆದರೆ ಮುಂದಿನ ಶೈಕ್ಷಣಿಕ ವರ್ಷದಿಂದ ಮಾಡಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸರ್ಕಾರಕ್ಕೆ ಸಲಹೆ ನೀಡಿದರು.

ಮಹಿಳಾ ಕುಸ್ತಿ ಪಟುಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಕ್ಕೆ ಗುರಿಯಾಗಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್‌ಗೆ ದಾವೂದ್ ಇಬ್ರಾಹಿಂ ಜತೆ ನಂಟಿದೆ. ದಾವೂದ್‌ಇಬ್ರಾಹಿಂಗೆ ಬ್ರಿಜ್ ಭೂಷಣ್ ಸಿಂಗ್ ಕ್ಲೋಸ್ ಅಸೋಸಿಯೇಟ್ಸ್ ಆಗಿದ್ದಾನೆ. ಅಂತವನ ರಕ್ಷಣೆಗೆ ಬಿಜೆಪಿ ನಿಂತಿರುವುದು ಸರಿಯಲ್ಲ. ಸಂಸತ್‌ನಲ್ಲಿ ರಾಜದಂಡ ಪ್ರತಿಷ್ಠಾಪಿಸಿ, ಮಹಿಳಾ ಕುಸ್ತಿಪಟುಗಳ ಮೇಲೆ ಪೊಲೀಸರ ದಂಡ ಪ್ರಯೋಗಿಸಲಾಗಿದೆ. ಆರೋಪಕ್ಕೆ ಗುರಿಯಾಗಿರುವ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನೂತನ ಸಂಸತ್ ಭವನದ ಉದ್ಘಾಟನೆಯ ಸಂದರ್ಭಗಳಲ್ಲಿ ನಡೆದ ಘಟನೆಗಳು ಸಂವಿಧಾನದ ಅಣಕವಾಗಿವೆ. ಈ ಕಾರ್ಯಕ್ರಮ ಮೋದಿಯವರ ಪಟ್ಟಾಭಿಷೇಕದಂತಿತ್ತು. ಸಂವಿಧಾನ ಬರೆದುಕೊಟ್ಟಿರುವ ಅಂಬೇಡ್ಕರ್ ಅವರ ಹೆಸರನ್ನು ಅಂದು ಪ್ರಸ್ತಾಪಿಸಲಿಲ್ಲ. ದೇಶದ ಪ್ರಥಮ ಪ್ರಜೆ ಹಾಗೂ ಸೇನೆಯ ಮೂರು ವಿಭಾಗಗಳ ತುಕಡಿಗಳಿಗೆ ಮುಖ್ಯಸ್ಥರಾಗಿರುವ ರಾಷ್ಟ್ರಪತಿಯನ್ನು ಆಹ್ವಾನಿಸದೆ ಕಡೆಗಣಿಸಲಾಯಿತು. ಒಂದರ್ಥದಲ್ಲಿ ಮೋದಿಯವರ ಪಟ್ಟಾಭಿಷೇಕದಂತೆ ಕಾರ್ಯಕ್ರಮ ನಡೆದಿದೆ. ಎಲ್ಲವೂ ನಾನೇ ಎಂದು ಬಿಂಬಿಸಿಕೊಳ್ಳಲು ಮೋದಿ ಈ ರೀತಿ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅರಸರ ಕಾಲದಲ್ಲಿ ರಾಜ ದಂಡವನ್ನು ಜನರನ್ನು ಹೆದರಿಸಿ ಆಡಳಿತ ನಡೆಸಲು ಬಳಸಲಾಗುತ್ತಿತ್ತು. ಆದರೆ ಈಗ ರಾಜದಂಡವನ್ನು ಸಂಸತ್‌ನಲ್ಲಿ ಪ್ರತಿಷ್ಠಾಪಿಸುವ ಅಗತ್ಯವಿರಲಿಲ್ಲ. ನಾವೀಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net