

ಚನ್ನರಾಯಪಟ್ಟಣ: ಅಪಘಾತ ಹಾಗೂ ಕಾಯಿಲೆಯಿಂದ ಬಳಲುವವರ ಜೀವ ಉಳಿಸಲು ರಕ್ತದಾನ ಮಹತ್ತರ ಪಾತ್ರ ವಹಿಸುತ್ತದೆ. ರಕ್ತದಾನ ಮಾಡಲು ಜನರು ಮುಂದೆ ಬರಬೇಕು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಪತಿ ಎಚ್.ಪಿ.ಮೋಹನ್ ಹೇಳಿದರು.
ಕಾರೆಕೆರೆ ಕೃಷಿ ಮಹಾವಿದ್ಯಾಲಯ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಸನ ಜಿಲ್ಲಾ ಮತ್ತು ಚನ್ನರಾಯಪಟ್ಟಣ ತಾಲೂಕು ಘಟಕ ಸಹಯೋಗದಲ್ಲಿ ವಿಶ್ವ ರಕ್ತ ದಾನಿಗಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ರಕ್ತದಾನದ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಮಾಹಿತಿ ಕೊರತೆ ಇದ್ದು, ರಕ್ತದಾನ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ರಕ್ತದಾನದಂತಹ ಮಹತ್ವಪೂರ್ಣ ಕಾರ್ಯದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.
ರಕ್ತಕ್ಕೆ ಪರ್ಯಾಯ ವಸ್ತುವಿಲ್ಲ. ಅದನ್ನು ಕೃತಕವಾಗಿ ತಯಾರಿಸಲೂ ಸಾಧ್ಯವಿಲ್ಲ. ವ್ಯಕ್ತಿಯು ಪ್ರತಿ ಮೂರು ತಿಂಗಳಿಗೊಮ್ಮೆ ಒಂದು ಬಾರಿಯಾದರೂ ರಕ್ತದಾನ ಮಾಡಿದಲ್ಲಿ ದೇಹದಲ್ಲಿ ಹೊಸ ರಕ್ತ ಉತ್ಪಾದನೆ ಆಗುವುದರೊಂದಿಗೆ ಹೃದಯಾಘಾತ, ಕ್ಯಾನ್ಸರ್, ಹೃದಯ ಸಂಬಂಧಿ ರೋಗಗಳು ಸೇರಿದಂತೆ ವಿವಿಧ ಕಾಯಿಲೆಗಳಿಂದ ದೂರ ಉಳಿಯಬಹುದು ಎಂದು ತಿಳಿಸಿದರು.
ಕೃಷಿ ಮಹಾವಿದ್ಯಾಲಯದ ಪ್ರಾಂಶುಪಾಲ ಮುನಿಸ್ವಾಮಿ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಬೇಕು ಹಾಗೂ ಸಮಾಜಮುಖಿ ಕೆಲಸಗಳನ್ನು ಮಾಡಬೇಕು. ಆರೋಗ್ಯವಂತರು ನಿಯಮಿತವಾಗಿ ರಕ್ತದಾನ ಮಾಡಬೇಕು. ಜಿಲ್ಲಾಸ್ಪತ್ರೆಯಲ್ಲಿ ರಕ್ತದ ಬೇಡಿಕೆ ತೀವ್ರವಾಗಿ ಹೆಚ್ಚಾಗುತ್ತಿದೆ. ನೆರೆ ಜಿಲ್ಲೆಗಳಿಂದಲೂ ರೋಗಿಗಳು ಬರುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಂಘ, ಸಂಸ್ಥೆಗಳು ವರ್ಷಕ್ಕೆ ಕನಿಷ್ಠ ಒಮ್ಮೆಯಾದರೂ ರಕ್ತದಾನ ಶಿಬಿರ ಆಯೋಜಿಸಬೇಕು ಎಂದು ಹೇಳಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲೂಕು ಘಟಕದ ಸಭಾಪತಿ ಎಚ್.ಜಿ.ಭರತ್ ಕುಮಾರ್ ಮಾತನಾಡಿ, ‘ರಕ್ತ ನೀಡಿ-ಭರವಸೆ ನೀಡಿ-ಒಟ್ಟಾಗಿ ನಾವು ಜೀವಗಳನ್ನು ರಕ್ಷಿಸೋಣ’ ಎಂಬ ಘೋಷ ವಾಕ್ಯದಡಿ ಈ ಬಾರಿ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ದಾನಿಗಳು ರಕ್ತದಾನ ಮಾಡಬೇಕು ಎಂದು ತಿಳಿಸಿದರು.
ದೇವರು ಮನುಷ್ಯನಿಗೆ ಒಂದು ಅದ್ಭುತವಾದ ಶಕ್ತಿ ನೀಡಿದ್ದಾನೆ. ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ರಕ್ತದಿಂದ ಮೂರು ಜನರ ಜೀವ ಉಳಿಸುವ ಅವಕಾಶ ಕೊಟ್ಟಿದ್ದಾನೆ. ಯುವಕರು ಹೆಚ್ಚಿನ ರೀತಿ ರಕ್ತದಾನ ಮಾಡುವುದರಿಂದ ಇನ್ನೊಂದು ಕುಟುಂಬದಲ್ಲಿ ಸಂತೋಷವನ್ನು ಕಾಣಬಹುದು ಹಾಗೂ ನಮ್ಮ ಆರೋಗ್ಯ ಸಹ ಸುಧಾರಿಸುತ್ತದೆ ಎಂದರು.
ಶಿಬಿರದಲ್ಲಿ 90 ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಕಾಲೇಜು ಯುವ ರೆಡ್ ಕ್ರಾಸ್ ಘಟಕದ ಡಾ. ಶಿವಬಸಪ್ಪ, ಜಿಲ್ಲಾ ಘಟಕದ ಕಾರ್ಯದರ್ಶಿ ಶಬ್ಬೀರ್ ಅಹಮದ್, ತಾಲೂಕು ಘಟಕದ ಕಾರ್ಯದರ್ಶಿ ಜಬಿವುಲ್ಲಾ ಬೇಗ್, ಜಿಲ್ಲಾ ಘಟಕದ ನಿರ್ದೇಶಕರಾದ ಜಯೇಂದ್ರ ಕುಮಾರ್, ಉದಯ್ ಕುಮಾರ್, ಉದಯ ಶಂಕರ್, ತಾಲೂಕು ಘಟಕದ ನಿರ್ದೇಶಕ ಅವಿನಾಶ್ ಇತರರು ಇದ್ದರು.