ಪದ ಪದ ಜೋಡಿಸಿದರೆ ಆಗುವುದಿಲ್ಲ ಕಾವ್ಯ

17sgr2
ಸಾಗರದ ಶೃಂಗೇರಿ ಶಂಕರ ಮಠದಲ್ಲಿ ಮಲೆನಾಡು ಗಮಕಲಾ ಸಂಘದಿಂದ ಆಯೋಜಿಸಿದ್ದ ಗಮಕ ಕಾರ್ಯಕ್ರಮದಲ್ಲಿ ವಂದಗದ್ದೆ ಚಂದ್ರಮೌಳಿ ಅವರ ಸಮರ್ಪಣಾ ಕೃತಿಯನ್ನು ಸಂಘದ ಅಧ್ಯಕ್ಷ ಕೆ.ಆರ್.ಕೃಷ್ಣಯ್ಯ ಲೋಕಾರ್ಪಣೆ ಮಾಡಿದರು. ವಿ.ಗಣೇಶ್, ಬಿ.ಟಿ.ಅರುಣ, ಅಮೃತ್ ಜೋಗ್ ಇತರರಿದ್ದರು.
Published on

ಸಾಗರ: ಪದ ಪದ ಜೋಡಿಸಿದರೆ ಕಾವ್ಯ ಆಗುವುದಿಲ್ಲ. ವಾಸ್ತವತೆ ಜತೆ ಭಾವನೆಗಳ ಅನಾವರಣವಾಗಬೇಕು. ಲಯ ಛಂದಸ್ಸು ಎಲ್ಲವನ್ನು ಒಳಗೊಂಡಿರುವ ಕಾವ್ಯ ಸುಲಭವಾಗಿ ಮೂಡುವುದಿಲ್ಲ ಎಂದು ಸಾಹಿತಿ ವಂದಗದ್ದೆ ಚಂದ್ರಮೌಳಿ ಹೇಳಿದರು.

ನಗರದ ಶೃಂಗೇರಿ ಶಂಕರ ಮಠದಲ್ಲಿ ಮಲೆನಾಡು ಗಮಕ ಕಲಾ ಸಂಘದಿಂದ ಏರ್ಪಡಿಸಿದ್ದ ಗಮಕ ವಾಚನ ಕಾರ್ಯಕ್ರಮದಲ್ಲಿ ಸಮರ್ಪಣೆ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾವ್ಯ ಓದುವಷ್ಟು ಹೊತ್ತು ಮಾತ್ರ ಸ್ಮತಿಪಟಲದಲ್ಲಿ ಇರುತ್ತದೆ. ಬರೆಯುವಾಗ ಅಂತರಂಗದ ಭಾವಕ್ಕೆ ತೆರೆದುಕೊಳ್ಳಬೇಕು ಮತ್ತು ಬರೆಯುವ ನಮಗೆ ಅದರಿಂದ ಸಂತೋಷ ಸಿಗಬೇಕು ಎಂದು ತಿಳಿಸಿದರು.
ಸಮರ್ಪಣೆ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಮಲೆನಾಡು ಗಮಕ ಕಲಾ ಸಂಘದ ಅಧ್ಯಕ್ಷ ಕೆ.ಆರ್.ಕೃಷ್ಣಯ್ಯ, ಐದು ಸ್ನಾತಕೋತ್ತರ ಪದವಿ ಪಡೆದಿರುವ ಚಂದ್ರಮೌಳಿ ನಿಜಾರ್ಥದ ಕವಿಗಳು. ಅವರಲ್ಲಿನ ಸಾಹಿತ್ಯ ಕೃಷಿ ಅಪಾರವಾಗಿದೆ ಎಂದರು.
ಹಿರಿಯ ಸಾಹಿತಿ ವಿ.ಗಣೇಶ್ ಕೃತಿ ಪರಿಚಯಿಸಿ, ಜಗತ್ತಿನಲ್ಲಿ ಎಲ್ಲಿಯವರೆಗೆ ನೋಡುವ ಕಣ್ಣು ಇರಲಿದೆಯೋ, ಆಲಿಸುವ ಕಿವಿ ಇರಲಿದೆಯೋ ಅಲ್ಲಿಯವರೆಗೂ ಕವಿ, ಬರಹಗಾರ ಶಾಶ್ವತವಾಗಿರುತ್ತಾನೆ. ಬರಹ ಹಾಗೆಯೇ ಉಳಿದು ಹೋಗಬಾರದು. ಅದು ಪ್ರಕಟಗೊಳ್ಳಬೇಕು ಎಂದು ತಿಳಿಸಿದರು.
ಕೃತಿಕಾರ ಚಂದ್ರಮೌಳಿ ಅವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಚಂದ್ರಮೌಳಿ ಅವರ ಸಮರ್ಪಣ ಕಾವ್ಯದ ಗಮಕ ಕಾರ್ಯಕ್ರಮ ನಡೆಯಿತು. ಅಶೋಕ ಹೆಗ್ಗೋಡು ವಾಚಿಸಿ, ಸದಾನಂದ ಶರ್ಮ ವ್ಯಾಖ್ಯಾನಿಸಿದರು. ಬಿ.ಟಿ.ಅರುಣ, ಅಮೃತ್ ಜೋಗ್, ರೇಖಾ ಪ್ರಸಾದ್, ಮಂಜಪ್ಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net