

ಬ್ಯಾಡಗಿ: ಲಿಂಗೈಕ್ಯ ಜಗದ್ಗುರು ಮುಪ್ಪಿನೇಂದ್ರ ಶ್ರೀ ಹಾಗೂ ಚನ್ನಬಸವ ಮಹಾಸ್ವಾಮಿಗಳ ಪುಣ್ಯಸ್ಮರಣೆ ಅಂಗವಾಗಿ ಪಟ್ಟಣದ ಮುಪ್ಪಿನಸ್ವಾಮಿ ಸಭಾಭವನದಲ್ಲಿ ಶುಕ್ರವಾರ ಶ್ರಾವಣ ಮಾಸದ ಜೀವನದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಆಶೀರ್ವಚನ ನೀಡಿದ ಮುಪ್ಪಿನೇಶ್ವರ ಮಠದ ಚನ್ನಮಲ್ಲಿಕಾರ್ಜುನ ಶ್ರೀಗಳು, ಆಧುನಿಕ ವ್ಯವಸ್ಥೆಯಲ್ಲಿ ಭಕ್ತರು ಸಂಪತ್ತು ಗಳಿಸುವುದರಲ್ಲಿ ತಲ್ಲೀನರಾಗಿದ್ದು, ಧ್ಯಾನ, ಪೂಜೆ, ಧಾರ್ಮಿಕ ಕೇಂದ್ರಗಳಿಗೆ ಮಾನ್ಯತೆ ನೀಡುತ್ತಿಲ್ಲ. ಪುರಾಣ, ಪ್ರವಚನ ಸಮಾರಂಭಗಳಲ್ಲಿ ಏರ್ಪಡಿಸಿದರೂ ಮಹಿಳೆಯರು ಪಾಲ್ಗೊಳ್ಳುತ್ತಿಲ್ಲ. ಟಿವಿ ಮಾಯೆಗೆ ಮಾರುಹೋಗಿ ಧಾರಾವಾಹಿ ಅನುಕರಣೆಯಲ್ಲಿ ತೊಡಗಿದ್ದಾರೆ.
ವರ್ಷಕ್ಕೊಮ್ಮೆಯಾದರೂ ಶ್ರಾವಣ ಮಾಸದಲ್ಲಿ ಕುಟುಂಬ ಸಮೇತ ಧರ್ಮ ಕಾರ್ಯಗಳಲ್ಲಿ ಪಾಲ್ಗೊಂಡು, ಗುರು, ದೇವರ ದರ್ಶನ ಮಾಡಬೇಕು. ನಮ್ಮ ಮೂಲ ಪರಂಪರೆ ಮರೆಯುತ್ತಿರುವುದು ಉತ್ತಮ ಬೆಳವಣಿಗೆ ಅಲ್ಲ, ಯುವಪೀಳಿಗೆಗೆ ಹಿರಿಯರು ಮಾರ್ಗದರ್ಶನ ನೀಡಬೇಕಿದೆ. ಈ ನಿಟ್ಟಿನಲ್ಲಿ 15 ದಿನಗಳ ಕಾಲ ಶ್ರಾವಣ ಮಾಸ ಕಾರ್ಯಕ್ರಮದಲ್ಲಿ ಅನುಭವಿಗಳಿಂದ ಪ್ರವಚನ ಏರ್ಪಡಿಸಲಾಗಿದೆ ಎಂದರು.
ಪ್ರವಚನಕಾರ ಜಗದೀಶ ಚಿನಿವಾಲ ಮಾತನಾಡಿ, ಅತ್ಯಂತ ಸ್ವಾರ್ಥಿಜೀವಿ ಪಟ್ಟಿಯಲ್ಲಿ ಮನುಷ್ಯನೇ ಮೊದಲು. ಗುರುವಿಗಿಂತ ದೊಡ್ಡ ವ್ಯಕ್ತಿ ಯಾರೂ ಇಲ್ಲ. ಗುರುವನ್ನು ನಿಂದಿಸುವ, ನೋವು ಉಂಟುಮಾಡುವ ದುಷ್ಕೃತ್ಯಗಳಿಗೆ ಎಂದಿಗೂ ತೆರಳಬಾರದು. ಮಠ, ಮಂದಿರಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸೇವಾಮನೋಭಾವ ಅರ್ಪಿಸಬೇಕೆಂದರು.
ಪುರಸಭೆ ಸದಸ್ಯೆ ಕವಿತಾ ಸೊಪ್ಪಿನಮಠ, ಕಸಾಪ ತಾಲೂಕಾಧ್ಯಕ್ಷ ಬಿ.ಎಂ.ಜಗಾಪುರ, ಮಾಜಿ ಸೈನಿಕ ರಾಜಣ್ಣ ಹೊಸಳ್ಳಿ, ಉಮೇಶ ಸಂಕಣ್ಣನವರ, ಗೀತಕ್ಕ ಕಬ್ಬೂರು, ಚನ್ನಬಸಪ್ಪ ಶೆಟ್ಟರ, ಮಂಜುಳಾ ಮಾಸೂರು, ಕರಿಬಸಯ್ಯ ಹಿರೇಮಠ, ಪ್ರಶಾಂತ ಯಾದವಾಡ, ಬಸವರಾಜ ಕಾಯಕದ ಇತರರಿದ್ದರು.