ಡಿಸಿ ಹುದ್ದೆ ನಿಭಾಯಿಸುವುದು ಸುಲಭವಲ್ಲ

Published on

ಬಳ್ಳಾರಿ : ಜಿಲ್ಲಾಧಿಕಾರಿ ಹುದ್ದೆಯಲ್ಲಿ ಕೆಲ ನಿರ್ಧಾರ ಕೈಗೊಳ್ಳುವಾಗ ಗೊಂದಲಕ್ಕೆ ಸಿಲುಕುತ್ತೇವೆ. ಅದೆಲ್ಲವೂ ನಿಭಾಯಿಸುವುದು ಅಷ್ಟು ಸುಲಭದ ಮಾತಲ್ಲ ಎಂದು ನಿರ್ಗಮಿತ ಡಿಸಿ ಪ್ರಶಾಂತ ಕುಮಾರ ಮಿಶ್ರಾ ಹೇಳಿದರು.

ನಗರದ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತದಿಂದ ಬುಧವಾರ ಸಂಜೆ ಆಯೋಜಿಸಿದ್ದ ನಿರ್ಗಮಿತ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರಿಗೆ ಬಿಳ್ಕೋಡುಗೆ ಮತ್ತು ನೂತನ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲೆಗೆ ಬಂದಾಗ ನೂರೆಂಟು ಸವಾಲುಗಳನ್ನು ಎದುರಿಸಲು ಸಿದ್ದನಾಗಿ ಬಂದಿದ್ದೆ. ಎಲ್ಲವನ್ನೂ ಸಾಧ್ಯವಾದ ಮಟ್ಟಿಗೆ ನಿಭಾಯಿಸಿರುವೆ. ಲೋಕಸಭೆ ಚುನಾವಣೆ ಹೊಸ ಅನುಭವ ನೀಡಿತು. ಜಿಲ್ಲಾಡಳಿತದ ಎಲ್ಲ ಅಧಿಕಾರಿ, ಸಿಬ್ಬಂದಿ ವರ್ಗದ ಸಹಾಯ, ಸಹಕಾರದಿಂದ ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡಿರುವೆ ಎಂದು ಮೆಲುಕು ಹಾಕಿದರು.

ಡಿಸಿ ನಾಗೇಂದ್ರ ಪ್ರಸಾದ್.ಕೆ ಮಾತನಾಡಿ, ಜಿಲ್ಲೆಯು ಆಡಳಿತಕ್ಕೆ ಹೆಸರುವಾಸಿಯಾಗಿದೆ. ಹಾಗೇಯೇ ಅನೇಕ ಸವಾಲುಗಳಿಂದ ಕೂಡಿದ್ದು ಅಭಿವೃದ್ಧಿ ಕಾರ್ಯಗಳ ನಿರೀಕ್ಷೆಯಲ್ಲಿದೆ. ಪ್ರಶಾಂತ್ ಕುಮಾರ್ ಮಿಶ್ರಾ ಅವರ ಕಾಲಾವಧಿಯಲ್ಲಿ ಜಿಲ್ಲೆಯು ಕಂದಾಯ ಆಡಳಿತ ಕಾರ್ಯದಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿತ್ತು. ಅವರು ಮಾಡಿರುವ ಅಭಿವೃದ್ದಿ ಹಾಗೂ ಪ್ರಗತಿಪರ ಕೆಲಸಗಳು ಮುಂದುವರಿಯಲಿವೆ. ಅಧಿಕಾರಿ ವರ್ಗವು ನನಗೂ ಸಹಕಾರ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ನಿರ್ಗಮಿತ ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು. ಬಳಿಕ ನೂತನ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net