ಚನ್ನಪಟ್ಟಣ ಈಗ ನೆನಪಾಯ್ತಾ ಅಂದ ಹೆಚ್‌ಡಿಕೆ ಟೀಕೆಗೆ ಡಿಕೆಶಿ ‘ಶಾಂತಿ’ ಕೌಂಟರ್..!

New Project
Published on

ಬಹುನಿರೀಕ್ಷಿತ ಲೋಕಸಭೆಯ ಚುನಾವಣೆ ಮುಗಿದು ಕೇಂದ್ರದಲ್ಲಿ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದಿದೆ. ನಿರೀಕ್ಷೆಯಂತೆ ಎನ್​ಡಿಎ ಅಂಗಪಕ್ಷವಾಗಿ ಚುನಾವಣಾ ಪೂರ್ವದಲ್ಲೇ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಜೆಡಿಎಸ್​​ನಿಂದ ಆಯ್ಕೆಯಾಗಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೇಂದ್ರದಲ್ಲಿ ಸಂಪುಟ ದರ್ಜೆಯ ಮಂತ್ರಿಗಳಾಗಿ ಪ್ರಭಾವಿ ಖಾತೆಯನ್ನು ಪಡೆದು ಎಲ್ಲ ರಾಜ್ಯ ನಾಯಕರ ಹುಬ್ಬೇರುವಂತೆ ಮಾಡಿದ್ದರು. ಸಹಜವಾಗಿ ಮಂಡ್ಯ ಲೋಕಸಭೆಗೆ ಆಯ್ಕೆಗೊಂಡ ಕುಮಾರಸ್ವಾಮಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಎಂಎಲ್​ಎ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜ್ಯದ ಮೂರು ವಿಧಾನಸಭೆ ಸ್ಥಾನಗಳಿಗೆ ಮುಂದೆ ಉಪ ಚುನಾವಣೆ ನಡೆಯಲಿದೆ.

ಹಾವೇರಿ ಲೋಕಸಭಾ ಸದಸ್ಯರಾದ ಬಸವರಾಜ ಬೊಮ್ಮಾಯಿ ಅವರಿಂದ ತೆರವಾದ ಶಿಗ್ಗಾವಿ ಮತ್ತು ಬಳ್ಳಾರಿ ಸಂಸದರಾದ ತುಕಾರಾಮ್ ಅವರಿಂದ ತೆರವಾದ ಸೊಂಡೂರು ಕ್ಷೇತ್ರಕ್ಕಿಂತ ಕುಮಾರಸ್ವಾಮಿ ಅವರಿಂದ ತೆರವಾದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಈಗಾಗಲೇ ರಂಗೇರುತ್ತಿದೆ. ಕಾರಣ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸಹೋದರ ಡಿ.ಕೆ.ಸುರೇಶ್ ಸೋಲಿನಿಂದ ಕಂಗೆಟ್ಟಿರುವ ಡಿ.ಕೆ.ಶಿವಕುಮಾರ್, ಅಲ್ಲಾದ ಮುಖಭಂಗದ ಸೇಡನ್ನು ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ತೀರಿಸಿಕೊಳ್ಳಲು ರೆಡಿಯಾದಂತಿದೆ. ಚನ್ನಪಟ್ಟಣ ಕ್ಷೇತ್ರವನ್ನು ಶತಾಯ ಗತಾಯ ತಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕೆಂಬ ಸಂಕಲ್ಪ ಟ್ರಬಲ್ ಶೂಟರ್ ಎಂದೇ ರಾಜಕಾರಣದಲ್ಲಿ ಪ್ರಸಿದ್ಧವಾಗಿರುವ ಡಿಸಿಎಂ ಡಿಕೆಶಿ ಅವರದ್ದು. ಈ ಮಾತಿಗೆ ಇಂಬು ನೀಡುವಂತೆ ಕಳೆದೆರಡು ದಿನದ ಹಿಂದೆ ಡಿ.ಕೆ.ಶಿವಕುಮಾರ್ ಚನ್ನಪಟ್ಟಣಕ್ಕೆ ಗ್ರಾಂಡ್ ಎಂಟ್ರಿ ಕೊಟ್ಟು ಹಲವು ಅನುಮಾನಗಳಿಗೆ ರೆಕ್ಕೆ-ಪುಕ್ಕ ಬರುವಂತೆ ಮಾಡಿದ್ದರು. ಸಾಲದ್ದಕ್ಕೆ ಪರೋಕ್ಷವಾಗಿ ತಾವೇ ಚುನಾವಣೆಗೆ ಸ್ಪರ್ಧಿಸುವ ಹಾಗೆ ಮಾತನ್ನಾಡಿದ್ದರು. ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಡಿಕೆ ನಡೆ ಬಗ್ಗೆ ಹಲವು ವಿಶ್ಲೇಷಣೆಗಳು ಆರಂಭವಾಗಿದ್ದವು. ಆದರೆ ಅದೇನಾಯ್ತೊ ಗೊತ್ತಿಲ್ಲ. ತಮ್ಮ ಹೇಳಿಕೆಯಿಂದ ಯೂಟರ್ನ್​ ಹೊಡೆದಂತೆ ಮಾತಾಡಿದ್ರು ಡಿಕೆಶಿ.

ಈ ನಡುವೆ ಡಿಕೆಶಿ ಚನ್ನಪಟ್ಟಣ ಎಂಟ್ರಿ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದರು. 'ಡಿಕೆಶಿಗೆ ಈಗ ಚನ್ನಪಟ್ಟಣ ನೆನಾಪಾಗಿದೆಯಾ ? ವಿಧಾನಸಭೆ ಚುನಾವಣೆ ನಡೆದು ಒಂದೂವರೆ ವರ್ಷವಾಗಿದೆ ಈಗ ಚನ್ನಪಟ್ಟಣಕ್ಕೆ ಬಂದಿದ್ದಾರೆ' ಎಂದು ಮಾಧ್ಯಮದವರ ಮುಂದು ಗುಡುಗಿದರು. ಈ ಮೂಲಕ ಉಪಚುನಾವಣೆ ಸಮರಕ್ಕೆ ಚನ್ನಪಟ್ಟಣ ಸಜ್ಜಾಗೆ ಬಿಡ್ತಾ ಎಂಬ ಪ್ರಶ್ನೆ ಬಹಳ ಜನರಲ್ಲಿ ಕಾಡೋಕೆ ಶುರುವಾಗಿತ್ತು. ಇದರ ಜೊತೆಗೆ ಚನ್ನಪಟ್ಟಣದಿಂದ ಜೆಡಿಎಸ್ ಬೆಂಬಲದೊಂದಿಗೆ ಬಿಜೆಪಿಯಿಂದ ಆಯ್ಕೆಯಾಗಬೇಕೆಂಬುದು ಸಿ.ಪಿ.ಯೋಗೀಶ್ವರ ಲೆಕ್ಕಾಚಾರವಿದ್ದಂತಿದೆ. ಮೈತ್ರಿ ಪಕ್ಷಗಳ ಒಳಗಿನ ಮಾತುಕತೆ ಏನಾಗಿದೆಯೋ ಗೊತ್ತಿಲ್ಲ. ಇವರಲ್ಲಿ ಹೊಂದಾಣಿಕೆಯಾಗದಿದ್ರೆ ಡಿಕೆಶಿ ಲೆಕ್ಕಾಚಾರ ಕೈಗೂಡುವ ಸಾಧ್ಯತೆ ಹೆಚ್ಚಾಗಿರುತ್ತೆ. ಅದಕ್ಕೆ ಒಂದು ಕಡೆ ಕುಮಾರಣ್ಣ, ಇನ್ನೊಂದು ಕಡೆ ಯೋಗೀಶ್ವರ ಡಿಕೆಶಿ ಮೇಲೆ ಮುಗಿ ಬೀಳುತ್ತಿದ್ದಾರೆ.

ಆದರೆ ಕುಮಾರಸ್ವಾಮಿಯವರ ಹೇಳಿಕೆಗೆ ಡಿಕೆಶಿ ಕೂಲಾಗಿ ಉತ್ತರ ಕೊಡೋ ಮೂಲಕ ಒಳಗಿಂದೊಳಗೆ ಬೇರೆ ಏನೋ ಲೆಕ್ಕಾಚಾರ ನಡೆಸ್ತಿದಾರೆ ಅನ್ನೋ ಅನುಮಾನ ಹಲವರಲ್ಲಿ ಮೂಡಿಸಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್​ ನಲ್ಲಿ ಬಿಬಿಎಂಪಿ ನಿರ್ಮಾಣ ಮಾಡಿರೋ ರೈಟ್ ಪಾರ್ಕಿಂಗ್ ಬಹುಮಹಡಿ ವಾಹನ ನಿಲಗಡೆ ಕೇಂದ್ರದ ಉದ್ಘಾಟನೆಗೆ ಬಂದಿದ್ದ ಡಿಕೆಶಿ ಅವರನ್ನು ಮಾಧ್ಯಮದವರು ಕುಮಾರಣ್ಣ ಹಿಂಗಂದವ್ರೆ, ನೀವು ಏನಂತಿರಿ ಅಂತ ಪ್ರಶ್ನೆ ಮಾಡಿದ್ರು. "ಹೌದಾ ಕುಮಾರಸ್ವಾಮಿ ಅವರ ಟೀಕೆಯನ್ನು ನಾನು ಶಾಂತಿಯಿಂದ ಸ್ವೀಕಾರ ಮಾಡ್ತೀನಿ" ಅಂತ ಚರ್ಚೆಗೆ ಅವಕಾಶ ಇಲ್ಲದ ಹಾಗೆ ಶಾಂತಿ ಮಂತ್ರ ಹೊರ ಹಾಕಿದ್ದು ಮಾತ್ರ ಅಚ್ಚರಿ ಉಂಟು ಮಾಡಿದೆ.

ಹೊರಗೆ ಎಷ್ಟೇ ಶಾಂತಿ ಮಂತ್ರ ಘೋಷಣೆ ಆದರೂ ಚುನಾವಣೆ ಡೇಟ್ ಘೋಷಣೆ ಆಗೋಕೆ ಮೊದಲೇ ಚನ್ನಪಟ್ಟಣ ರಾಜ್ಯದ ಗಮನ ಸೆಳೆದಿದ್ದು ಮಾತ್ರ ಸುಳ್ಳಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net