

ಮಹಾಲಿಂಗಪುರ: ಅನೂಪ ಆಸ್ಪತ್ರೆ ತನ್ನ ಅನುಪಮ ಸೇವೆಗೆ ಹೆಸರಾಗಿದ್ದು, ಈಗ ಅತ್ಯಾಧುನಿಕ ಸುಸಜ್ಜಿತ ಯಂತ್ರಗಳನ್ನು ಸ್ಥಾಪಿಸಿ ಸೇವೆಗೆ ಸಜ್ಜುಗೊಂಡಿದೆ. ಇದು ಡಾ. ಹಂಚಿನಾಳ ಕುಟುಂಬದ ಶ್ರಮ ಮತ್ತು ಸೇವಾ ಮನೋಭಾವದ ಪ್ರತೀಕ ಎಂದು ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಸ್ಥಳೀಯ ಮುಧೋಳ ರಸ್ತೆಯಲ್ಲಿರುವ ಅನೂಪ ಆಸ್ಪತ್ರೆ ಹಾಗೂ ಹಾರ್ಟ್‌ಕೇರ್ ಸೆಂಟರ್‌ನಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಹೃದಯರೋಗ ಸಂಬಂಧಿ ಕಾರ್ಡಿಯಾಕ್ ಕ್ಯಾತ್‌ಲ್ಯಾಬ್, ಸ್ತ್ರೀರೋಗಿಗಳ ಸಂಬಂಧಿ ವುಮೆನ್ಸ್ ಕ್ಲಿನಿಕ್, ಶಸರೋಗಿಗಳ ಸಂಬಂಧಿ ಮಾಡ್ಯೂಲರ್ ಆಪರೇಷನ್ ಥಿಯೇಟರ್, ತುರ್ತುರೋಗಿಗಳ ಸಂಬಂಧಿ ತುರ್ತು ನಿಗಾ ಘಟಕ(ಐಸಿಯು) ಯಂತ್ರ ಉದ್ಘಾಟಿಸಿ ಅವರು ಮಾತನಾಡಿದರು.
ಆಸ್ಪತ್ರೆ ಒಳಾಂಗಣ ಪ್ರವೇಶಿಸಿದರೆ ಇದು ಬನಾರಸ್ ವಿಶ್ವವಿದ್ಯಾಲಯದಂತೆ ಭಾಸವಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಬೆಂಗಳೂರು ನಗರಕ್ಕಿಂತ ಕಡಿಮೆ ಇಲ್ಲದಂತಹ ಅತ್ಯಾಧುನಿಕ ಯಂತ್ರಗಳು ಮತ್ತು ಅವುಗಳನ್ನು ನಿರ್ವಹಿಸುವ ಅನುಭವಿ ಹೃದಯರೋಗ ತಜ್ಞ ಡಾ. ಅನೂಪ ಹಂಚಿನಾಳ ಇಲ್ಲಿಯೇ ಇರುವುದು ಈ ಭಾಗದ ಜನತೆಯ ಪುಣ್ಯದ ಫಲ ಹಾಗೂ ಸಂತಸದ ವಿಷಯ ಎಂದರು.
ಹಾರ್ಟ್ ಅಟ್ಯಾಕ್‌ನಂತಹ ತುರ್ತು ಸಂದರ್ಭದಲ್ಲಿ ರೋಗಿಯು ಸಾವು-ಬದುಕಿನ ನಡುವೆ ಹೋರಾಡುತ್ತಿರುವಾಗ ಶೀಘ್ರ ಚಿಕಿತ್ಸೆ ಅವಶ್ಯಕತೆಯಿರುತ್ತದೆ. ದೂರದ ನಗರಗಳಿಗೆ ತೆರಳಲು ಸಮಯ ಹಾಗೂ ಹಣವೂ ಖರ್ಚಾಗುತ್ತದೆ. ತಂದೆ ಡಾ. ವಿಜಯ ಹಾಗೂ ನಳಿನಿ ಹಂಚಿನಾಳ ಅವರ ಸಲಹೆ ಮೇರೆಗೆ ಗ್ರಾಮೀಣ ಭಾಗದಲ್ಲಿ ಉಳಿದುಕೊಂಡು ಸೇವೆ ಸಲ್ಲಿಸುತ್ತಿರುವ ಡಾ. ಅನೂಪ ಹಂಚಿನಾಳ ಅವರ ಕ್ರಮ ಶ್ಲಾಘನೀಯ ಎಂದರು.
ಹುಬ್ಬಳ್ಳಿಯ ಜೆಜಿಎಂಎಂ ಮೆಡಿಕಲ್ ಕಾಲೇಜ್ ಪ್ರಾಚಾರ್ಯ ಡಾ.ಎಂ.ಜಿ. ಹಿರೇಮಠ ಮಾತನಾಡಿ, 30 ವರ್ಷಗಳಿಂದ ಈ ಭಾಗದಲ್ಲಿ ಸೇವೆ ಸಲ್ಲಿಸುತ್ತ ಹೆಸರುವಾಸಿಯಾಗಿರುವ ಡಾ. ವಿಜಯ ಹಂಚಿನಾಳ ಇಂದು ಒಬ್ಬ ವ್ಯಕ್ತಿಯಾಗದೆ ಒಂದು ಶಕ್ತಿಯಾಗಿ ಬೆಳೆದಿದ್ದಾರೆ. ಡಾ. ಅನೂಪ ಹೃದಯರೋಗದ ಬಗ್ಗೆ ವಿವಿಧೆಡೆ ತರಬೇತಿ ಪಡೆದು ನೈಪುಣ್ಯ ಸಾಧಿಸಿದ್ದಾರೆ. ಈ ಹಿಂದೆ ಹುಬ್ಬಳ್ಳಿಯ ಕೆಎಂಸಿಯಲ್ಲಿ ಕ್ಯಾತ್‌ಲ್ಯಾಬ್ ಕಟ್ಟಲು 5 ವರ್ಷ ಬೇಕಾಯಿತು. ಆದರೆ, ಡಾ. ಹಂಚಿನಾಳ ಅವರು ಕೇವಲ ಒಂದೇ ವರ್ಷದಲ್ಲಿ 3 ಕೋಟಿ ರೂ. ವೆಚ್ಚದ ಲ್ಯಾಬ್ ಸ್ಥಾಪಿಸಿ ಈ ಭಾಗದ ಜನತೆಗೆ ಮಹಾದುಪಕಾರ ಮಾಡಿದಂತಾಗಿದ್ದು, ರೋಗಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು.
ಬೆಳಗಾವಿಯ ನರರೋಗ ತಜ್ಞ ಡಾ.ಜಿ.ಎಂ. ವಾಲಿ, ಸ್ಥಳೀಯ ಡಾ.ಎ.ಆರ್. ಬೆಳಗಲಿ, ಡಾ. ವಿಜಯ ಹಂಚಿನಾಳ, ಹೃದಯ ರೋಗ ತಜ್ಞ ಡಾ. ಅನೂಪ ಹಂಚಿನಾಳ, ಸೀರೋಗ ಹಾಗೂ ಬಂಜೆತನ ನಿವಾರಣಾ ತಜ್ಞೆ ಡಾ.ಅಪೂರ್ವ ಹಂಚಿನಾಳ ಮಾತನಾಡಿದರು.
ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕಿ ನಳಿನಿ ಹಂಚಿನಾಳ, ಹುಬ್ಬಳ್ಳಿಯ ಡಾ. ಸುಭಾಷಿಣಿ ಹಿರೇಮಠ, ಡಾ. ಉಷಾ ಬೆಳಗಲಿ, ಡಾ.ಹರೀಶ ಬೆಳಗಲಿ, ಗಣ್ಯರಾದ ಯಲ್ಲನಗೌಡ ಪಾಟೀಲ, ಆರ್.ಟಿ. ಪಾಟೀಲ, ಶೇಖರ ಅಂಗಡಿ, ಚಂದ್ರು ಗೊಂದಿ, ಮುಧೋಳದ ಡಾ. ಉದಯ ನಾಯಕ, ಡಾ.ವಿ.ಎಸ್. ಮಮದಾಪುರ, ಜಿ.ಎಸ್. ಗೊಂಬಿ, ಶ್ರೀಶೈಲ ಮಠದ, ಸಂಜು ಅಂಗಡಿ, ಸಂಜೀವ ಶಿರೋಳ ಇತರರಿದ್ದರು.