

ಮೈಸೂರು: ಸಂಸತ್ ಭವನಕ್ಕೆ ನುಗ್ಗಿ ದಾಂಧಲೆ ಸೃಷ್ಟಿಸಿದ ಆರೋಪಿಗಳಿಗೆ ಪಾಸ್ ವಿತರಣೆಗೆ ಶಿಫಾರಸು ಮಾಡಿದ್ದ ಸಂಸದ ಪ್ರತಾಪ್ ಸಿಂಹ ಅವರಿಂದ ರಾಜೀನಾಮೆ ಕೇಳೋದು ಯಾರಿಗೂ ಶೋಭೆ ತರಲ್ಲ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸತ್‌ನ ಭದ್ರತಾ ಸಿಬ್ಬಂದಿ ಪಾಸ್ ಪರಿಶೀಲನೆ ಮಾಡಬೇಕಿತ್ತು. ಭದ್ರತಾ ಸಿಬ್ಬಂದಿ ವೈಫಲ್ಯದಿಂದ ಘಟನೆ ನಡೆದಿದೆ. ಇದಕ್ಕೆ ಪ್ರತಾಪ್ ಸಿಂಹ ಅವರ ರಾಜೀನಾಮೆ ಕೇಳೋದು ಸರಿಯಲ್ಲ. ಭದ್ರತಾ ಲೋಪ ಎಸಗಿರುವ ಅಧಿಕಾರಿಗಳಿಗೆ ಶಿಕ್ಷೆ ಆಗಬೇಕು ಎಂದರು.
ಕ್ಷೇತ್ರದ ಮತದಾರರು ಪಾಸ್ ಕೇಳಿದಾಗ ಸಂಸದರು, ಶಾಸಕರಾದ ನಾವು ಕೊಡಲೇಬೇಕು. ಪಾಸ್ ಕೇಳಿರುವ ವ್ಯಕ್ತಿ ನಮ್ಮ ಕ್ಷೇತ್ರದ ಮತದಾರರೇ ಎಂದು ಪರಿಶೀಲನೆ ಮಾಡುತ್ತೇವೆ. ಬಳಿಕ ಪಾಸ್ ನೀಡುತ್ತೇವೆ ಎಂದರು.
ರೈತರ ಸಾಲದ ಮೇಲಿನ ಬಡ್ಡಿಯನ್ನು ಮಾತ್ರ ಮನ್ನಾ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ. 2025ರ ತನಕ ರೈತರ ಸಾಲದ ಮೇಲಿನ ಬಡ್ಡಿಯನ್ನಾದರೂ ಮನ್ನಾ ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ರಾಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಇದೆ. ರೈತರು ಸಾಲ ಕಟ್ಟುವ ಸ್ಥಿತಿಯಲ್ಲಿ ಇಲ್ಲ. ಆದ್ದರಿಂದ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಮೈಸೂರು ವಿಮಾನ ನಿಲ್ದಾಣಕ್ಕೆ ಕೃಷ್ಣರಾಜ ಒಡೆಯರ್ ಹೆಸರು ಅಂತಿಮ. ಮೈಸೂರು ಕಟ್ಟಿ ಬೆಳೆಸಿ, ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರು ಇಡಬೇಕೆಂದಿರುವ ಶಾಸಕ ಪ್ರಸಾದ್ ಅಬ್ಬಯ್ಯ ಅವರದು ವೈಯಕ್ತಿಕ ಹೇಳಿಕೆ. ಅದಕ್ಕೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನ ಶಾಸಕರು ಬೆಂಬಲ ಸೂಚಿಸಿಲ್ಲ. ಸರ್ಕಾರ ಕೂಡ ಇದರ ಬಗ್ಗೆ ಪ್ರಸ್ತಾವನೆ ಇಟ್ಟಿಲ್ಲ ಎಂದು ತಿಳಿಸಿದರು.