ಸಂಜ್ಞೆ ಭಾಷೆಯನ್ನು ಪ್ರಪಂಚದ ಭಾಷೆ ಎಂದು ಕರೆದರೂ ಅತಿಶಯೋಕ್ತಿಯಿಲ್ಲ

16
Published on

ಮೈಸೂರು: ಎಲ್ಲರೂ ಒಂದೇ ರೀತಿಯಾಗಿ ಅರ್ಥೈಸಿಕೊಳ್ಳಬಹುದಾದ ಸಂಜ್ಞೆ ಭಾಷೆಯನ್ನು ಪ್ರಪಂಚದ ಭಾಷೆ ಎಂದು ಕರೆದರೂ ಅತಿಶಯೋಕ್ತಿಯಿಲ್ಲ ಎಂದು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕಿ ಪ್ರೊ.ಎಂ.ಪುಷ್ಪವತಿ ಅಭಿಪ್ರಾಯಪಟ್ಟರು.

ನಗರದ ಗಂಗೋತ್ರಿ ಬಡಾವಣೆಯಲ್ಲಿರುವ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಸೆಮಿನಾರ್ ಹಾಲ್‌ನಲ್ಲಿ ಮೈಸೂರು ಮತ್ತು ಭಾರತೀಯ ಸಂಕೇತ ಭಾಷಾ ಸಂಶೋಧನಾ ಮತ್ತು ತರಬೇತಿ ಕೇಂದ್ರ ವತಿಯಿಂದ ಸೋಮವಾರ ಆಯೋಜಿಸಿದ್ದ ಮೂಲ ಭಾರತೀಯ ಸಂಕೇತ ಭಾಷೆಯ ಐದು ದಿನಗಳ ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.

ಕಿವುಡು ಸಮಸ್ಯೆಯುಳ್ಳ ಸಾರಾ ಸನ್ನಿ ಅವರಿಗೆ ಸಂಜ್ಞೆ ಭಾಷೆಯ ಮೂಲಕ ವಾದ ನಡೆಸಲು ಅವಕಾಶ ದೊರತಿದ್ದು, ಆ ಮೂಲಕ ಸಂಜ್ಞೆ ಭಾಷೆಯ ಸೇವೆ ನ್ಯಾಯಾಂಗಕ್ಕೂ ವಿಸ್ತಾರಗೊಂಡಿದೆ. ಆಯಿಷ್ ಸಂಸ್ಥೆ ಸಂಜ್ಞೆ ಭಾಷೆಯನ್ನು ತಿಳಿಸಿಕೊಡುವುದರ ಜತೆಗೆ ವಿದ್ಯಾರ್ಥಿಗಳಲ್ಲಿ ಸಂವಹನದ ಕಲೆ ವೃದ್ಧಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಕಾರ್ಯೋನ್ಮುಖವಾಗಿದೆ ಎಂದರು.

ಮೌನವೂ ಕೂಡಾ ಮನುಷ್ಯರು ನಡೆಸುವ ಸಂವಹನದ ಪ್ರಮುಖ ಭಾಗವಾಗಿದೆ. ಮಾತು ಪ್ರಕೃತಿದತ್ತವಾಗಿ ಬಂದಿರುವ ವರದಾನ. ಆದರೆ ಕೆಲವೊಮ್ಮೆ ಮಾತಿಲ್ಲದಿದ್ದರೆ ಚೆನ್ನಾಗಿರುತ್ತಿತ್ತು ಅನ್ನಿಸುತ್ತದೆ. ಏಕೆಂದರೆ ಕೆಲವೊಮ್ಮೆ ನಮ್ಮ ಮಾತು ಕೇಳಿಸಿಕೊಳ್ಳುವವರು ಅವರ ಭಾವಕ್ಕೆ ಅನುಗುಣವಾಗಿ ಅದನ್ನು ತಪ್ಪಾಗಿ ಅರ್ಥೈಸುವ ಸನ್ನಿವೇಶ ಹೆಚ್ಚಿರುತ್ತದೆ. ಇದರಿಂದ ಅನಗತ್ಯ ತೊಂದರೆಗಳೂ ಉಂಟಾಗುತ್ತದೆ. ಆದ್ದರಿಂದ ಸಂಜ್ಞೆ ಭಾಷೆಯನ್ನು ಯಾರೂ ತಪ್ಪಾಗಿ ಅರ್ಥೈಸಿ ಕೊಳ್ಳುವುದಿಲ್ಲ. ಜಗತ್ತಿನಾದ್ಯಂತ ಯಾವುದೇ ತೊಂದರೆಯಿಲ್ಲದೆ ಬಳಸಬಹುದು. ಆಗಾಗಿ ಮೌನವು ಕೂಡ ಸಂವಹನವಾಗಿದೆ ಎಂದು ವಿಶ್ಲೇಷಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net