

ಮೈಸೂರು: ವೈದ್ಯಕೀಯ ಕ್ಷೇತ್ರದಲ್ಲಿ ಎಐ ತಂತ್ರಜ್ಞಾನ ಬಳಕೆಯಿಂದ ಮಿಲಿಯನ್‌ಗಟ್ಟಲೇ ಜನರ ಜೀವ ಉಳಿಸಬಹುದು. ಆದರೆ, ಈ ತಂತ್ರಜ್ಞಾನ ವಿವಿಧ ಕ್ಷೇತ್ರಗಳಲ್ಲಿ ದುರ್ಬಳಕೆಯಾದರೆ ವಿಶ್ವಕ್ಕೆ ಅಪಾಯ ಎದಾರಾಗುವುದು ನಿಶ್ಚಿತ ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ ಕಳವಳ ವ್ಯಕ್ತಪಡಿಸಿದರು.
ನಗರದ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಶನಿವಾರ ಕೃತಕ ಬುದ್ಧಿಮತ್ತೆ ಕುರಿತು ಆಯೋಜಿಸಿದ್ದ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಎಐ ತಂತ್ರಜ್ಞಾನದ ಬಳಕೆ ಪ್ರಮಾಣ ಹೆಚುತ್ತಲೇ ಇದೆ. ಬಳಕೆ ಪ್ರಮಾಣ ಹೆಚ್ಚುತ್ತಿದ್ದಂತೆಯೇ ಮತ್ತೊಂದೆಡೆ ಇದರಿಂದ ಸಮಸ್ಯೆಗಳು ಸಹ ಸೃಷ್ಟಿಯಾಗುತ್ತಿದೆ. ಎಐ ತಂತ್ರಜ್ಞಾನ ಬಳಸಿ ಸೈಬರ್ ದಾಳಿ, ಯುದ್ಧ ನಡೆಸುವುದು ಸೇರಿದಂತೆ ಮನುಷ್ಯನಿಗೆ ಮಾರಕವಾದ ಚಟುವಟಿಕೆಗಳಿಗೆ ಬಳಕೆ ಮಾಡಿದರೆ ವಿಶ್ವಕ್ಕೆ ದೊಡ್ಡ ಅಪಾಯ ಎದುರಾಗುತ್ತದೆ. ಅಲ್ಲದೆ, ವಿಶ್ವದ ಆರ್ಥಿಕತೆಯ ಮೇಲೆ ದೊಡ್ಡ ದುಷ್ಪರಿಣಾಮಗಳನ್ನು ಉಂಟು ಮಾಡುತ್ತದೆ. ಈ ಬಗ್ಗೆ ಎಚ್ಚರ ವಹಿಸುವುದು ಅಗತ್ಯ ಎಂದರು.
ಕಳೆದ ಎರಡು ದಶಕಗಳಿಂದ ಡಿಜಿಟಲ್ ತಂತ್ರಜ್ಞಾನ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಇದೀಗ ಎಐ ತಂತ್ರಜ್ಞಾನ ಜನರ ಬದುಕಿನಲ್ಲಿಕ ಹಾಸುಹೊಕ್ಕಾಗುತ್ತಿದೆ. ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಎಐ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಟೆಕ್ಸ್ಟ್, ಇಮೇಜ್, ವಿಡಿಯೋ ಸೃಷ್ಟಿಗೆ ಹೆಚ್ಚಿನ ಪ್ರಮಾಣದಲ್ಲಿ ಎಐ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲಾಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಹಲವು ರೀತಿಯ ಉಪಯೋಗವನ್ನು ಎಐ ತಂತ್ರಜ್ಞಾನದ ಮೂಲಕ ಪಡೆಯಲಾಗುತ್ತಿದೆ ಎಂದು ಹೇಳಿದರು.
ಜಗತ್ತು ಅತ್ಯಂತ ವೇಗವಾಗಿ ಬದಲಾವಣೆ ಆಗುತ್ತಿದ್ದು, ಈ ವೇಗಕ್ಕೆ ಪೂರಕವಾಗಿ ಜನರ ಜೀವನ ಶೈಲಿಯಲ್ಲೂ ಬದಲಾವಣೆ ಆಗುತ್ತಿದೆ. ತಿನ್ನುವ ಆಹಾರದಿಂದ ಹಿಡಿದು ನಮ್ಮ ಬದುಕಿನ ಪ್ರತಿಯೊಂದು ವಿಷಯಗಳು ಅವಸರದಿಂದ ಕೂಡಿದೆ. ಈ ವೇಗದ ಬೆಳವಣಿಗೆ ಸ್ಥಳೀಯವಾಗಿ ಹಾಗೂ ಜಾಗತಿಕವಾಗಿ ಕಂಡು ಬರುತ್ತಿದೆ. 21ನೇ ಶತಮಾನ ಹಲವು ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿರುವ ಶತಮಾ ನವಾಗಿದೆ. ಇದು ಆಯ್ಕೆಗಳ ಶತಮಾನ ಕೂಡ ಆಗಿದೆ. ಹಲವು ಅವಕಾಶಗಳು ಈ ಶತಮಾನದಲ್ಲಿ ತೆರೆದುಕೊಳ್ಳುತ್ತಿದೆ ಎಂದು ಅಭಿಪ್ರಾಯಪಟ್ಟರು.
ಬೆಂಗಳೂರಿನ ವರ್ಲ್ಡ್ ಟ್ರೇಡ್ ಸೆಂಟರ್‌ನ ಸ್ಯಾಮ್‌ಸಂಗ್ ಎಲೆಕ್ಟ್ರೋ-ಮೆಕಾನಿಕ್ಸ್ ಕಂಪನಿಯ ಪ್ರಧಾನ ಇಂಜಿನಿಯರ್ ಡಾ. ಎಸ್. ಮಂಜುನಾಥ್ ಮಾತನಾಡಿ, ಎಐ ಈಗ ಕೇವಲ ತಂತ್ರಜ್ಞಾನವಾಗಿರದೆ, ಒಂದು ಸಾಮರ್ಥ್ಯವಾಗಿದೆ. ಜತೆಗೆ ಎಐ ಬಳಸುವ ಸಾಮರ್ಥ್ಯ ಹೊಂದಿರುವವರು ಯಶಸ್ವಿಯಾಗುತ್ತಾರೆ. ಎಐ ಹೊಸ ಅವಕಾಶಗಳ ಬಾಗಿಲನ್ನು ತೆರೆಯುತ್ತಿದೆ. ಪರಿವರ್ತನಾತ್ಮಕ ಬದಲಾವಣೆಗೆ ಎಲ್ಲರೂ ಹೊಂದಿಕೊಳ್ಳಬೇಕು ಎಂದು ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಗಣಕ ವಿಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಡಿ.ಎಸ್. ಗುರು ಮಾತನಾಡಿ, ಎಐ ನಮಗೆ ಲಭ್ಯವಿರುವ ದೊಡ್ಡ ಪ್ರಮಾಣದ ಡೇಟಾವನ್ನು ಸಮರ್ಥವಾಗಿ ಬಳಸಿಕೊಳ್ಳಲು ಸಹಾಯ ಮಾಡುತ್ತದೆ. ಎಐ ಮಾನವರನ್ನು ಬದಲಿಸಲು ಬಂದಿಲ್ಲ. ಬದಲಿಗೆ ನಮ್ಮ ಸಾಮರ್ಥ್ಯಗಳನ್ನು ವೃದ್ಧಿಗೊಳಿಸಲು ಬಂದಿರುವಂಥದ್ದು ಎಂಬುದನ್ನು ತಿಳಿಯಬೇಕು ಎಂದರು. ವೇದಿಕೆಯಲ್ಲಿ ಪ್ರಾಂಶುಪಾಲ ಡಾ.ರೇಚಣ್ಣ, ಐಕ್ಯೂಎಸಿ ಸಂಯೋಜಕ ಎಚ್.ಜಿ. ಪ್ರದೀಪ್ ಹಾಗೂ ಇತರರು ಇದ್ದರು.