

ಮೈಸೂರು: ಮಕ್ಕಳ ಸಂವೇದನೆಯನ್ನು ಜಾಗೃತಗೊಳಿಸುವುದೇ ಇಂದಿನ ಅಗತ್ಯವಾಗಿದೆ ಎಂದು ರಂಗಕರ್ಮಿ ಪ್ರಸನ್ನ ಹೇಳಿದರು.
ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ, ವರ್ಣ ಕಲೆಕ್ಟಿವ್ ಮತ್ತು ಮೈಸೂರ್ ಆರ್ಟ್ ಸೆಂಟರ್ ಸಹಯೋಗದಲ್ಲಿ ನಗರದ ಹಾರ್ಡ್ವಿಕ್ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ‘ಆರ್ಟ್ ಇಟ್ರೋ’ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕಲೆಯನ್ನು ನೋಡೋದು ಹೇಗೆ? ಸಿನಿಮಾ, ಚಿತ್ರ ನೋಡೋದು ಹೇಗೆ? ಸಂಗೀತ ಕೇಳುವುದು ಹೇಗೆ? ಟಿವಿನಲ್ಲಿ ಯಾವುದಾದರೂ ಒಳ್ಳೆಯ ಕಾರ್ಯಕ್ರಮ ಬಂದರೆ ನೋಡೋದು ಹೇಗೆ? ಇದನ್ನೆಲ್ಲ ಕಲಿಸುವುದನ್ನೇ ಕಲಾ ಶಿಕ್ಷಣ ಅಂದುಕೊಂಡಿದ್ದೇವೆ.
ಆದರೆ, ಮಕ್ಕಳ ಸಂವೇದನೆಯನ್ನು ಜಾಗೃತಗೊಳಿಸದೆ ನಾವು ಇದನ್ನು ಅವರಿಗೆ ಹೇಳಿಕೊಡಲು ಸಾಧ್ಯವಿಲ್ಲ. ಹೀಗಾಗಿ, ಮಕ್ಕಳ ಸಂವೇದನೆಯನ್ನು ಜಾಗೃತಗೊಳಿಸುವ ಚಟುವಟಿಕೆ ಒಳಗೊಂಡಿರುವ ತರಬೇತಿ ಕಾರ್ಯಾಗಾರ ಇಂದಿನ ಅಗತ್ಯ ಎಂದು ಅಭಿಪ್ರಾಯಪಟ್ಟರು.
ಸಂಸ್ಥೆಯ ಕಲಾವಿದರಿಂದ ಪ್ರಸನ್ನ ಅವರು ಬರೆದು ನಿರ್ದೇಶಿಸಿದ ‘ಪಿಪ್ಪಿಗೊಂದು ಪಪ್ಪಿ’ ಮಕ್ಕಳಿಗಾಗಿ ನಾಟಕ ಪ್ರದರ್ಶಿಸಲಾಯಿತು. ರಂಗಕರ್ಮಿ ಡಾ.ಎಚ್.ಎಸ್.ಉಮೇಶ್ ಇದ್ದರು.