ಸಾಂಪ್ರದಾಯಿಕ ಅಡುಗೆ ಪದ್ಧತಿಗೆ ಮರಳುವುದು ಅಗತ್ಯ

11-HNL-2
Published on

ಹಾನಗಲ್ಲ: ನಮ್ಮ ಆಹಾರ ಪದ್ಧತಿಗಳ ಬದಲಾವಣೆಯಿಂದ ಆರೋಗ್ಯ ಸಮಸ್ಯೆ ಆವರಿಸುತ್ತಿವೆ. ಮಾರುಕಟ್ಟೆಯ ಸಿದ್ಧ ಅಡುಗೆ ಆಹಾರಕ್ಕೆ ಮಾರು ಹೋಗುತ್ತಿದ್ದೇವೆ. ನಮ್ಮ ಸಾಂಪ್ರದಾಯಿಕ ಅಡುಗೆ ಪದ್ಧತಿ ಮರಳಬೇಕಿದೆ ಎಂದು ನಿವೃತ್ತ ಉಪನ್ಯಾಸಕ ಮಾರುತಿ ಶಿಡ್ಲಾಪೂರ ಹೇಳಿದರು.

ಪಟ್ಟಣದ ಕೆಎಲ್​ಇ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಬುಧವಾರ ಆಯೋಜಿಸಿದ್ದ ಸ್ವಾಸ್ಥ್ಯ ಸಂಕಲ್ಪ ಹಾಗೂ ಸುಜ್ಞಾನ ನಿಧಿ ಶಿಷ್ಯವೇತನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ನಮ್ಮ ಶಿಕ್ಷಣದ ಮೂಲಕ ಸಮಾಜಮುಖಿ ಜೀವನಾದರ್ಶಗಳನ್ನು ಸಂಪತ್ತಾಗಿ ಪಡೆಯಬೇಕು. ಮನಸನ್ನು ವಿಕಾರಗೊಳಿಸುವ ಪ್ರಭಾವಳಿ ನಮ್ಮನ್ನು ಸುತ್ತಿಕೊಳ್ಳುವಂತಾಗಬಾರದು. ಎಲ್ಲೆಂದರಲ್ಲಿ ನಮ್ಮನ್ನು ದುರಭ್ಯಾಸಗಳಿಗೆ ಪ್ರಚೋದಿಸಿ, ಆಕರ್ಷಿಸುವ ಬಣ್ಣ ಬಣ್ಣದ ಲೋಕದ ಬಗೆಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ. ತಂದೆ -ತಾಯಿ, ಗುರು- ಹಿರಿಯರ ಮಾರ್ಗದರ್ಶನದಲ್ಲಿ ಶುದ್ಧ ಬದುಕಿನತ್ತ ಹೊರಬೇಕಿದೆ. ದುಶ್ಚಟಗಳಿಂದ ದೂರವುಳಿದ ಸದಾಚಾರ ಅಳವಡಿಸಿಕೊಂಡು ಸಾತ್ವಿಕ ಜೀವನ ಸಾಗಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ದಿವಾಕರ ಕಮ್ಮಾರ ಮಾತನಾಡಿ, ಯುವಕರೇ ಈ ದೇಶದ ಸಂಪತ್ತು. ನಮ್ಮ ಬದುಕಿನ ಯಶಸ್ಸಿಗಾಗಿ ನಾವು ಪಡೆಯುತ್ತಿರುವ ಶಿಕ್ಷಣದ ಜತೆ ಉತ್ತಮ ಸಂಸ್ಕಾರ ಪಡೆಯುವ ಅಗತ್ಯವಿದೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಜಿಲ್ಲಾ ಜನಜಾಗೃತಿ ಸಮಿತಿ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಗ್ರಾಮೀಣ ಮಹಿಳೆಯರಿಗೆ ಉತ್ತಮ ಆರ್ಥಿಕ, ಸಾಮಾಜಿಕ ಸಬಲತೆ ತಂದುಕೊಟ್ಟಿದೆ. ಉತ್ತಮ ಸಾಂಸ್ಕೃತಿಕ ವಿಚಾರಗಳನ್ನು ನೀಡುವ ಮೂಲಕ ಉತ್ತಮ ಬದುಕಿನ ಮಾರ್ಗದರ್ಶನ ನೀಡುತ್ತಿದೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ತಾಲೂಕು ಯೋಜನಾಧಿಕಾರಿ ರಘುರಾಮ, ಧರ್ಮಸ್ಥಳ ಯೋಜನೆ ಮೇಲ್ವಿಚಾರಕಿ ನೇತ್ರಾವತಿ ಮಂಡಗನಾಳ, ಸೇವಾ ಪ್ರತಿನಿಧಿ ಶಿಲ್ಪಾ ಸುಲಾಖೆ, ನಾಗರತ್ನಾ ಅಪ್ಪಾಜಿ, ಉಪನ್ಯಾಸಕರಾದ ಶ್ರೀಧರ ಉರಣಕರ, ಮಂಜುನಾಥ ಹಡಪದ, ಅಜಿತಕುಮಾರ, ಪರಸಪ್ಪ ಮಾಯನಗೌಡ್ರ, ಧರ್ವೆಂದ್ರ ಕುನ್ನೂರ, ಚೈತ್ರಾ ಮುದ್ದಣ್ಣನವರ, ಸೋಮನಾಥ ಪೂಜಾರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net